ಜಮ್ಮು-ಕಾಶ್ಮೀರ: ಮೂರು ಲಷ್ಕರ್-ಎ-ತೊಯ್ಬಾ ಉಗ್ರರ ಹತ್ಯೆ

Update: 2017-11-21 15:45 GMT

ಶ್ರೀನಗರ. ನ.21: ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸೇರಿದ ಮೂವರು ಉಗ್ರರನ್ನು ಉತ್ತರ ಕಾಶ್ಮೀರದ ಹಾಂಡ್ವಾರಾ ಜಿಲ್ಲೆಯ ಮಗಮ ಪ್ರದೇಶದಲ್ಲಿ ಹತ್ಯೆ ಮಾಡಿರುವುದಾಗಿ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕರು ಮಂಗಳವಾರ ತಿಳಿಸಿದ್ದಾರೆ. ಹತ್ಯೆಗೈಯ್ಯಲ್ಪಟ್ಟ ಉಗ್ರರು ಪಾಕಿಸ್ತಾನಿಗಳಾಗಿದ್ದರು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಮಹಾನಿರ್ದೇಶಕ ಮುನೀರ್ ಖಾನ್ ಉಗ್ರರು ಅಡಗಿರುವ ತಾಣದ ಬಗ್ಗೆ ನಿಖರ ಮಾಹಿತಿ ಪಡೆದುಕೊಂಡು ಸಿಆರ್‌ಪಿಎಫ್, ಪೊಲೀಸ್ ಮತ್ತು ಸೇನೆ ಜಂಟಿಯಾಗಿ ಮಧ್ಯರಾತ್ರಿಯೇ ಕಾರ್ಯಾಚರಣೆ ಆರಂಭಿಸಿತು. ಒಂದು ಮನೆಯೊಳಗೆ ಅಡಗಿದ್ದ ಉಗ್ರರು ಶರಣಾಗುವಂತೆ ಸೂಚನೆ ನೀಡಲಾಯಿತು. ಆದರೆ ಅವರು ನಮ್ಮತ್ತ ಗುಂಡು ಹಾರಿಸಿದರು. ಪ್ರತಿದಾಳಿಯಲ್ಲಿ ಮೂವರು ಉಗ್ರರು ಹತರಾದರು ಮತ್ತು ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪಾಕಿಸ್ತಾನವು ಸಾಧ್ಯವಾದಷ್ಟು ಉಗ್ರರನ್ನು ಗಡಿರೇಖೆಯಿಂದೀಚೆಗೆ ಕಳುಹಿಸಲು ಪ್ರಯತ್ನಿಸುತ್ತಿದೆ. ಇನ್ನು ಯಾವಾಗ ಬೇಕಾದರೂ ಮಂಜು ಬೀಳಬಹುದು ಹಾಗಾಗಿ ಈ ಸಮಯದಲ್ಲಿ ನಾವು ಬಹಳ ಎಚ್ಚರಿಕೆ ವಹಿಸಬೇಕಿದೆ ಎಂದವರು ವಿವರಿಸಿದರು.

ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ಝಕಿ-ಉರ್ ರೆಹ್ಮಾನ್ ಲಖ್ವಿಯ ಸೋದರಳಿಯ ಸೇರಿದಂತೆ ಲಷ್ಕರ್‌ನ ಆರು ಉಗ್ರರನ್ನು ಸೇನೆಯು ಬಂಡಿಪೊರದ ಹಜಿನ್ ಪ್ರದೇಶದಲ್ಲಿ ಹತ್ಯೆ ಮಾಡಿದ ಎರಡು ದಿನಗಳ ಅವಧಿಯಲ್ಲಿ ಈ ಘಟನೆ ನಡೆದಿದೆ.

ಒವೈದ ಅಲಿಯಾಸ್ ಒಸಾಮ ಲಷ್ಕರ್-ಎ-ತೈಬಾ ಸೇರಿದ ಲಖ್ವಿ ಕುಟುಂಬದ ಮೂರನೇ ಸದಸ್ಯನಾಗಿದ್ದಾನೆ ಎಂದು ಸೆಪ್ಟೆಂಬರ್ 21ರಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿತ್ತು. ಆತನ ಹಿರಿಯ ಸಹೋದರ ಮುಸೈಬ್ ಜನವರಿಯಲ್ಲಿ ಬಂಡಿಪೊರದ ಹಜಿನ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತನಾಗಿದ್ದರೆ ಲಖ್ವಿಯ ಪುತ್ರ 20ರ ಹರೆಯದ ಮುಹಮ್ಮದ್ ಖಾಸಿಮ್ ಸೇನೆ ಮತ್ತು ಜಮ್ಮ ಕಾಶ್ಮೀರ ಪೊಲೀಸ್ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಗೆ ಬಲಿಯಾಗಿದ್ದ.

ನವೆಂಬರ್ ಮೊದಲ ವಾರದಲ್ಲಿ ಜೈಶ್-ಎ-ಮುಹಮ್ಮದ್ ಮುಖ್ಯಸ್ಥ ಮಸೂದ್ ಅಝರ್‌ನ ಸೋದರಳಿಯ ಸೇನಾ ಎನ್‌ಕೌಂಟರ್‌ಗೆ ಬಲಿಯಾಗಿದ್ದ. ಈತನ ಜೊತೆ ಸ್ಥಳೀಯ ಉಗ್ರನೊಬ್ಬ ಕೂಡಾ ಹತನಾಗಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News