ಈ ಸೋಲು ಅವಮಾನಕರ ಹೊಡೆತ: ಬ್ರಿಟನ್ ಮಾಧ್ಯಮಗಳ ಬಣ್ಣನೆ

Update: 2017-11-21 16:18 GMT

ಲಂಡನ್, ನ. 21: ಬ್ರಿಟನ್ ಅಭ್ಯರ್ಥಿಯನ್ನು ಹಿಂದಿಕ್ಕಿ ಭಾರತದ ದಲ್ವೀರ್ ಭಂಡಾರಿ ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾಗಿ ಆಯ್ಕೆಯಾಗಿರುವುದು ಬ್ರಿಟನ್ ಪಾಲಿಗೆ ‘ಅವಮಾನಕರ ಹೊಡೆತ’ವಾಗಿದೆ ಎಂದು ಬ್ರಿಟನ್ ಮಾಧ್ಯಮಗಳು ಮಂಗಳವಾರ ಬಣ್ಣಿಸಿವೆ.

ಅದೇ ವೇಳೆ, ಈ ಜಿದ್ದಾಜಿದ್ದಿನ ಸ್ಪರ್ಧೆಯು ಉಭಯ ದೇಶಗಳ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಭಾರತ ಹೇಳಿದೆ.

ಆರಂಭದಿಂದಲೇ ಎರಡೂ ದೇಶಗಳ ರಾಜತಾಂತ್ರಿಕರು ಪರಸ್ಪರ ಸಂಪರ್ಕದಲ್ಲಿದ್ದರು ಹಾಗೂ ಇದು ಭಾರತ ಮತ್ತು ಬ್ರಿಟನ್‌ಗಳ ನಡುವಿನ ಪ್ರಬಲ ಬಾಂಧವ್ಯವನ್ನು ತೋರಿಸುತ್ತದೆ ಎಂದು ಬ್ರಿಟನ್‌ಗೆ ಭಾರತದ ಉಸ್ತುವಾರಿ ಹೈಕಮಿಶನರ್ ದಿನೇಶ್ ಪಟ್ನಾಯಕ್ ಹೇಳಿದರು.

ನ್ಯೂಯಾರ್ಕ್‌ನಲ್ಲಿ ಸೋಮವಾರ 11ನೆ ಸುತ್ತಿನ ಮತದಾನ ಆರಂಭಗೊಳ್ಳುವುದಕ್ಕೆ ಕೆಲವೇ ನಿಮಿಷಗಳ ಮೊದಲು, ವಿಶ್ವಸಂಸ್ಥೆಯಲ್ಲಿರುವ ಬ್ರಿಟನ್ ರಾಯಭಾರ ಕಚೇರಿಯು ಹೇಳಿಕೆಯೊಂದನ್ನು ನೀಡಿ, ಆಕಾಂಕ್ಷಿ ಸರ್ ಕ್ರಿಸ್ಟೋಫರ್ ಗ್ರೀನ್‌ವುಡ್ ಸೋಲು ಒಪ್ಪಿಕೊಳ್ಳುತ್ತಾರೆ ಹಾಗೂ ಹೇಗ್‌ನಲ್ಲಿರುವ ವಿಶ್ವಸಂಸ್ಥೆಯ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಲು ಭಾರತೀಯ ಸ್ಪರ್ಧಿಗೆ ಅವಕಾಶ ನೀಡುತ್ತಾರೆ ಎಂದು ಹೇಳಿತು.

‘ಜಿದ್ದಾಜಿದ್ದಿನ’ ಮತದಾನವು ಜಾಗತಿಕ ವೇದಿಕೆಯಲ್ಲಿ ಬ್ರಿಟನ್‌ನ ಕುಸಿಯುತ್ತಿರುವ ಪ್ರತಿಷ್ಠೆಯ ಸಂಕೇತವಾಗಿದೆ ಎಂದು ಬ್ರಿಟನ್ ಮಾಧ್ಯಮಗಳು ಹೇಳಿವೆ.

‘‘71 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಬ್ರಿಟನ್‌ನ ನ್ಯಾಯಾಧೀಶರು ಇರುವುದಿಲ್ಲ’’ ಎಂದು ‘ಗಾರ್ಡಿಯನ್’ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News