ಬಸ್ ಢಿಕ್ಕಿ: ರಾಜಸ್ಥಾನ ಮೂಲದ ಬೈಕ್ ಸವಾರ ಮೃತ್ಯು
ಉಡುಪಿ, ನ.21: ಬಸ್ಸೊಂದು ಢಿಕ್ಕಿ ಬೈಕ್‌ಗೆ ಹೊಡೆದ ಪರಿಣಾಮ ರಾಜ ಸ್ಥಾನ ಮೂಲದ ಬೈಕ್ ಸವಾರ ಮೃತಪಟ್ಟ ಘಟನೆ ಉಡುಪಿ ಶಾರದಾ ಕಲ್ಯಾಣ ಮಂಟಪ ಜಂಕ್ಷನ್ ಸಮೀಪ ನ.20 ರಂದು ರಾತ್ರಿ ವೇಳೆ ನಡೆದಿದೆ.
ಮೃತರನ್ನು ರಾಜಸ್ಥಾನದ ಶ್ರೀರಾಮ್(18) ಎಂದು ಗುರುತಿಸಲಾಗಿದೆ. ಇವರು ಉಡುಪಿಯಲ್ಲಿರುವ ತನ್ನ ಕುಟುಂಬದವರ ಮನೆಗೆಂದು ಬಂದಿದ್ದು, ನ.20ರಂದು ರಾತ್ರಿ 11ಗಂಟೆ ಸುಮಾರಿಗೆ ರೈಲ್ವೆ ನಿಲ್ದಾಣಕ್ಕೆ ಹೋಗಿ ವಾಪಾಸ್ಸು ಮನೆಗೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಮಣಿಪಾಲದಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಬೈಕ್‌ಗೆ ಕಡಿಯಾಳಿ ಪೆಟ್ರೋಲ್ ಬಂಕ್ ಜಂಕ್ಷನ್‌ನಿಂದ ಮಣಿಪಾಲ ಕಡೆಗೆ ಏಕಮುಖ ಸಂಚಾರದ ವಿರುದ್ಧ ದಿಕ್ಕಿನಲ್ಲಿ ಬಂದ ಬಸ್ ಢಿಕ್ಕಿ ಹೊಡೆಯಿತು. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಶ್ರೀರಾಮ್ ನ.21ರಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತ ಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಉಡುಪಿ ಸಂಚಾರ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.