ನ. 23ರಂದು ಸಹ್ಯಾದ್ರಿಯಲ್ಲಿ 'ಎ.ಕೆ. ಕಾರ್ಪೊರೇಟ್ ಕ್ರಿಕೆಟ್ ಬ್ಯಾಶ್'

Update: 2017-11-21 16:47 GMT

ಮಂಗಳೂರು, ನ.20: ನಗರದ ಬ್ರಾಂಡ್ ವಿಷನ್ ಸಂಸ್ಥೆ ವತಿಯಿಂದ ಕರಾವಳಿ ಕರ್ನಾಟಕದ ಪ್ರಥಮ ಕಾರ್ಪೊರೇಟ್ ಲೀಗ್ ಕ್ರಿಕೆಟ್ ಪಂದ್ಯಾಟ 'ಎ.ಕೆ. ಕಾರ್ಪೊರೇಟ್ ಕ್ರಿಕೆಟ್ ಬ್ಯಾಶ್' ನವೆಂಬರ್ 23ರಿಂದ 26ರವರೆಗೆ ಅಡ್ಯಾರಿನ ಸಹ್ಯಾದ್ರಿ ಕಾಲೇಜಿನ ಮೈದಾನದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಬ್ರಾಂಡ್ ವಿಷನ್ ಸಂಸ್ಥೆಯ ಕಾರ್ಯನಿರ್ವಾಹಕ ಇಮ್ತಿಯಾಝ್ ಮುಹಮ್ಮದ್, ಎಕೆ ಸಮೂಹ ಸಂಸ್ಥೆ ಪಂದ್ಯಕೂಟದ ಟೈಟಲ್ ಸ್ಪೋನ್ಸರ್ ಆಗಿರುತ್ತದೆ ಎಂದರು.

ಪಂದ್ಯಾಟವು ಪ್ರಥಮ ಎರಡು ದಿನಗಳಲ್ಲಿ ಹಗಲು ಹಾಗೂ ಕೊನೆಯ ಎರಡು ದಿನಗಳಲ್ಲಿ ಹೊನಲು ಬೆಳಕಿನಲ್ಲಿ ನಡೆಯಲಿದೆ. ವಿಜೇತ ಮತ್ತು ದ್ವಿತೀಯ ಸ್ಥಾನ ಪಡೆಯುವ ತಂಡಗಳಿಗೆ ಟ್ರೋಫಿಯೊಂದಿಗೆ ಆಕರ್ಷಕ ನಗದು ಬಹುಮಾನ ಹಾಗೂ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು.

ಪಂದ್ಯಾಟ ಲೀಗ್ ಮತ್ತು ನಾಕೌಟ್ ಆಧಾರದಲ್ಲಿ ತಲಾ 10 ಓವರ್‌ಗಳ ಇನ್ನಿಂಗ್ಸ್ ಒಳಗೊಂಡಿರುತ್ತದೆ. ಉಡುಪಿ ಮತ್ತು ದ.ಕ. ಜಿಲ್ಲೆಯ ವಿವಿಧ ಕಂಪನಿ, ಬ್ಯಾಂಕ್ ಮತ್ತು ವಿಶ್ವವಿದ್ಯಾಲಯಗಳ 24 ತಂಡಗಳು ಭಾಗವಹಿಸಲಿವೆ. ತಂಡಗಳನ್ನು 8 ವಿಭಾಗಗಳನ್ನಾಗಿ ವಿಭಜಿಸಲಾಗಿದ್ದು, ಲೀಗ್ ಹಂತದ ಪಂದ್ಯಗಳ ಬಳಿಕ ಪ್ರತಿಯೊಂದು ಗುಂಪಿನಿಂದ ಪ್ರಥಮ ಸ್ಥಾನವನ್ನು ಪಡೆಯುವ ಒಂದೊಂದು ತಂಡವು ನಾಕೌಟ್ ಹಂತ ಪ್ರವೇಶಿಸಲಿವೆ.

ವಿಜೇತ ತಂಡಗಳಿಗೆ ರಾಜ್ಯ, ರಾಷ್ಟ್ರ ಮಟ್ಟದ ಕಾರ್ಪೊರೇಟ್ ಪಂದ್ಯಕೂಟದಲ್ಲಿ ಭಾಗವಹಿಸುವ ಅವಕಾಶ ಲಭ್ಯವಾಗಲಿದೆ. ಹಾರ್ಡ್ ಟೆನಿಸ್‌ಬಾಲ್ ಉಪಯೋಗದೊಂದಿಗೆ ಟರ್ಫ್ ಪಿಚ್‌ನಲ್ಲಿ ಜರಗಲಿದೆ. ಪ್ರಥಮ ಪಂದ್ಯವು ನ. 23ರಂದು ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ಬೆಳಗ್ಗೆ 9.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಸಂದರ್ಭ ಟ್ರೋಫಿ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಹಮ್ಮದ್ ಸಿರಾಜುದ್ದೀನ್, ಎ.ಕೆ. ದಿಲ್ಲಿ ಫರ್ನಿಚರ್ ನಿರ್ದೇಶಕ ಆರ್ಕಿಟೆಕ್ಟ್ ಮುಹಮ್ಮದ್ ನಿಸಾರ್, ಎ.ಕೆ. ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಎ.ಕೆ. ನಿಯಾಝ್, ಫೈಝಲ್, ನಾಗರಾಜ್, ಬಾಲಕೃಷ್ಣ ಪರ್ಕಳ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News