ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿ ಬಿದ್ದ ರಿಕ್ಷಾ: ಚಾಲಕ ಸಹಿತ ಏಳು ಮಂದಿಗೆ ಗಾಯ

Update: 2017-11-21 16:48 GMT

ಬಂಟ್ವಾಳ, ನ. 21: ರಿಕ್ಷಾವೊಂದು ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ ಚಾಲಕ ಸಹಿತ ಏಳು ಮಂದಿ ಪ್ರಯಾಣಿಕರು ಗಂಭೀರ ಗಾಯಗೊಂಡ ಘಟನೆ ಕಲ್ಲಡ್ಕ-ಕಾಂಞಂಗಾಡು ರಸ್ತೆಯ ಪಡಿಬಾಗಿಲು ಜಂಕ್ಷನ್‌ನಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಮುಳಿಯ ನಿವಾಸಿ ವಿಶ್ವನಾಥ ಎಂಬವರು ಚಲಾಯಿಸುತ್ತಿದ್ದ ರಿಕ್ಷಾದಲ್ಲಿ  6 ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದೆ. ಪಡಿಬಾಗಿಲು ಜಂಕ್ಷನ್ ಬಳಿ ರಿಕ್ಷಾ ನಿಲ್ಲಿಸಿದ್ದು, ರಿಕ್ಷಾ ಏಕಾಎಕಿ ಮುಂದಕ್ಕೆ ಚಲಿಸಿ ರಸ್ತೆ ಬದಿಯ ತಡೆಗೋಡೆಯಿಂದ ಸುಮಾರು 20 ಅಡಿ ಆಳದ ಕಂದಕಕ್ಕೆ ಉರುಳಿದೆ ಬಿದ್ದಿದೆ.

ಪ್ರಪಾತದಲ್ಲಿ ಚರಂಡಿ ಒಳಗೆ ಸಿಲುಕಿದ್ದ ಜನರನ್ನು ಸ್ಥಳೀಯರು ಹರಸಾಹಸ ಪಟ್ಟು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಅಪಘಾತದಿಂದ ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರಿಗೆ ವಿಟ್ಲ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ವಿಟ್ಲ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News