ಪರಿಸರದಲ್ಲಿ 986 ಪಟ್ಟು ಅಧಿಕ ವಿಕಿರಣ ಮಟ್ಟ: ಖಚಿತಪಡಿಸಿದ ರಶ್ಯ

Update: 2017-11-21 17:26 GMT

ಮಾಸ್ಕೊ, ನ. 21: ರಶ್ಯದ ಹಲವು ಕಡೆಗಳಲ್ಲಿ ಅತ್ಯಧಿಕ ಮಟ್ಟದಲ್ಲಿ ರುತೀನಿಯಂ-106 ಐಸೋಟೋಪ್‌ನ ವಿಕಿರಣಗಳು ಪತ್ತೆಯಾಗಿವೆ ಎಂದು ರಶ್ಯ ಹೇಳಿದೆ.

ಯುರೋಪ್‌ನ ಆಕಾಶವನ್ನು ನಿಗೂಢ ವಿಕಿರಣಶೀಲ ವಸ್ತುವೊಂದರ ಮೋಡ ಆಕ್ರಮಿಸಿದೆ ಎಂಬುದಾಗಿ ಫ್ರಾನ್ಸ್ ಪರಮಾಣು ಸಂಸ್ಥೆ ಐಆರ್‌ಎಸ್‌ಎನ್ ವರದಿ ಮಾಡಿದ ವಾರಗಳ ಬಳಿಕ ರಶ್ಯ ಇದನ್ನು ಖಚಿತಪಡಿಸಿದೆ.

ಯುರೋಪ್‌ನಲ್ಲಿ ಪತ್ತೆಯಾದ ರುತೀನಿಯಂ-106 ವಿಕಿರಣಗಳು ರಶ್ಯದಲ್ಲಿ ನಡೆದ ಪರಮಾಣು ಅಪಘಾತದಿಂದಾಗಿ ಸೋರಿಕೆಯಾದ ವಿಕರಣಗಳಾಗಿರಬಹುದು ಎಂಬುದಾಗಿ ಪರಿಣತರು ಹಾಗೂ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣದ ಉರಾಲ್ ಪ್ರದೇಶದಲ್ಲಿ ಸೆಪ್ಟಂಬರ್ ತಿಂಗಳ ಕೊನೆಯ ಹೊತ್ತಿಗೆ ರುತೀನಿಯಂ-106 ವಿಕಿರಣಗಳ ಸೋರಿಕೆ ದಾಖಲಾಗಿದೆ ಎಂದು ರಶ್ಯ ಹವಾಮಾನ ಸಂಸ್ಥೆ ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ. ಇದು ‘ಅತ್ಯಂತ ಅಧಿಕ ಮಟ್ಟದ ಮಾಲಿನ್ಯವಾಗಿದೆ’ ಎಂದು ಅದು ಹೇಳಿದೆ.

ಅತ್ಯಂತ ಸಾಂದ್ರ ವಿಕಿರಣಗಳು ದಕ್ಷಿಣದ ಉರಾಲ್‌ನ ಚೆಲ್ಯಬಿಂಸ್ಕ್ ವಲಯದ ಅರ್ಗಯಾಶ್ ಎಂಬ ಗ್ರಾಮದಲ್ಲಿ ದಾಖಲಾಗಿದೆ ಹಾಗೂ ಅದು ನೈಸರ್ಗಿಕ ಮಟ್ಟಕ್ಕಿಂತ 986 ಪಟ್ಟು ಅಧಿಕವಾಗಿದೆ ಎಂದು ಸಂಸ್ಥೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News