ಕಸ ವಿಲೇವಾರಿಗೆ ಮೇಯರ್ ನಿರ್ಲಕ್ಷ: ಬಿಜೆಪಿ ಆರೋಪ

Update: 2017-11-22 12:14 GMT

ಮಂಗಳೂರು, ನ.22: ಮನಪಾ ವ್ಯಾಪ್ತಿಯಲ್ಲಿ ಮಂಗಳವಾರದಿಂದ ಕಸ ವಿಲೇವಾರಿ ಆಗಿಲ್ಲ. ಇದಕ್ಕೆ ಮೇಯರ್‌ರ ನಿರ್ಲಕ್ಷ್ಯವೇ ಕಾರಣ ಎಂದು ಬಿಜೆಪಿ ಆರೋಪಿಸಿದೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಡಿ. ವೇದವ್ಯಾಸ ಕಾಮತ್ ಮನಪಾ ಮತ್ತು ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್ ಕಸ ವಿಲೇವಾರಿಗೆ ಸಂಬಂಧಿಸಿ 7 ವರ್ಷದ ಒಪ್ಪಂದ ಮಾಡಿಕೊಂಡಿದ್ದು, ಇದೀಗ ಮನಪಾ ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್‌ಗೆ ಪಾವತಿ ಬಾಕಿ ಇರಿಸಿದೆ. ಹಾಗಾಗಿ ಸದ್ರಿ ಗುತ್ತಿಗೆದಾರ ಸಂಸ್ಥೆಯು ಮಂಗಳವಾರದಿಂದ ಕಸ ವಿಲೇವಾರಿ ಮಾಡಿಲ್ಲ. ಇದರಿಂದ ಮಂಗಳೂರು ಗಬ್ಬೆದ್ದಿದೆ ಎಂದರು.

ನಮ್ಮ ಮಂಗಳೂರು ಸ್ವಚ್ಛ ಮಂಗಳೂರು ಎಂದು ಹೇಳಿಕೊಳ್ಳಬೇಕಾದ ನಾವು ಮೇಯರ್‌ರ ನಿರ್ಲಕ್ಷ್ಯದಿಂದ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಿಗಡಾಯಿಸಿದೆ. ಅದನ್ನು ಪರಿಹರಿ ಸಬೇಕಾದ ಮೇಯರ್ ನೃತ್ಯ ಅಭ್ಯಾಸದಲ್ಲಿ ತೊಡಗಿರುವುದು ಖೇದಕರ. ಮಂಗಳವಾರ ಸಂಜೆ ಬಿಜೆಪಿ ಕಾರ್ಪೊರೇಟರ್‌ಗಳು ಆಯುಕ್ತರ ಬಳಿ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿದೆ. ಈ ಸಂದರ್ಭ ಮೇಯರ್ ಆಡಳಿತ ಪಕ್ಷದ ಸದಸ್ಯರ ಜೊತೆ ಚರ್ಚೆ ನಡೆಸಿದ್ದಾರೆಯೇ ವಿನ: ಅಲ್ಲಿದ್ದ ಪಾಲಿಕೆಯ ಬಿಜೆಪಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಯ ಪರಿಹಾರಕ್ಕೆ ಮುಂದಾಗಿಲ್ಲ ಎಂದು ವೇದವ್ಯಾಸ ಕಾಮತ್ ದೂರಿದರು.

ಗುತ್ತಿಗೆದಾರ ಸಂಸ್ಥೆಗೆ ಹಣ ಪಾವತಿಸದ ಕಾರಣ ಸಂಸ್ಥೆಯು ತನ್ನ ಕೆಲಸಗಾರರಿಗೆ ವೇತನ ನೀಡಿಲ್ಲ. ಇದರಿಂದ ಕಾರ್ಮಿಕರು ಕಸ ವಿಲೇವಾರಿ ಮಾಡದೆ ಪ್ರತಿಭಟನೆ ನಡೆಸುವಂತಾಗಿದೆ. ದಿನಂಪ್ರತಿ 280 ಟನ್‌ನಿಂದ 320 ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಕಾರ್ಮಿಕರ ಪ್ರತಿಭಟನೆಯಿಂದ ಈ ಕಸ ಅಲ್ಲಲ್ಲಿ ರಾಶಿ ಬೀಳುವಂತಾಗಿದೆ ಎಂದ ವೇದವ್ಯಾಸ ಕಾಮತ್, ಮನಪಾದಲ್ಲಿ ಆರ್ಥಿಕ ಕೊರತೆ ಸೃಷ್ಟಿಯಾಗಿದ್ದು, ಮುಖ್ಯಮಂತ್ರಿಯ ಜೊತೆ ನಿಕಟ ಸಂಪರ್ಕದಲ್ಲಿರುವ ಮೇಯರ್ ಹಣ ಬಿಡುಗಡೆಗೆ ಪ್ರಯತ್ನ ನಡೆಸಿಲ್ಲ. ಮನಪಾದ ಆಯುಕ್ತರೂ ಆಗಿದ್ದ ಶಾಸಕ ಜೆ.ಆರ್.ಲೋಬೊ ಕೂಡ ಈ ಬಗ್ಗೆ ಮೌನ ತಾಳಿರುವುದು ಖಂಡನೀಯ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾರ್ಪೊರೇಟರ್‌ಗಳಾದ ರೂಪಾ ಡಿ. ಬಂಗೇರಾ, ಪೂರ್ಣಿಮಾ, ಸುಧೀರ್ ಶೆಟ್ಟಿ ಕಣ್ಣೂರು, ರಾಜೇಂದ್ರ ಕುಮಾರ್, ದಿವಾಕರ, ವಿಜಯ ಕುಮಾರ್ ಶೆಟ್ಟಿ, ಮಾಜಿ ಕಾರ್ಪೊರೇಟರ್ ಭಾಸ್ಕರ ಚಂದ್ರ ಶೆಟ್ಟಿ, ಬಿಜೆಪಿ ಮುಖಂಡ ಸಂಜಯ ಪ್ರಭು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News