ಶಂಕರನಾರಾಯಣದಲ್ಲಿ ನಾಡ ಬಾಂಬ್ ತಯಾರಿ ಜಾಲ: ಮೂವರ ಸೆರೆ

Update: 2017-11-22 13:38 GMT

ಉಡುಪಿ, ನ. 22: ನಾಡ ಬಾಂಬ್ ತಯಾರಿ ಹಾಗೂ ಮಾರಾಟ ಜಾಲವನ್ನು ಕಾರ್ಕಳ ಪೊಲೀಸರು ಪತ್ತೆ ಹಚ್ಚಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಿ, ಒಟ್ಟು 33 ನಾಡ ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಉಡುಪಿ ಎಸ್ಪಿ ಕಚೇರಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಸಂಜೀವ ಎಂ.ಪಾಟೀಲ್ ಈ ಕುರಿತು ಮಾಹಿತಿ ನೀಡಿದರು.

ಶಂಕರನಾರಾಯಣ ಆಲ್ಬಾಡಿ ಗ್ರಾಮದ ಆರ್ಡಿ ಕೊಳಲಾಡಿಯ ಗುಣಕರ ಶೆಟ್ಟಿ (56), ಲಕ್ಷ್ಮಣ ಶೆಟ್ಟಿ ಯಾನೆ ಲಚ್ಚು ಶೆಟ್ಟಿ (67), ಹೆಬ್ರಿ ಕನ್ಯಾನ ಅರ್ಕುಂಜೆಯ ನಾಗೇಶ್ ನಾಯಕ್ (35) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ನ. 21ರಂದು ಸಂಜೆ 5 ಗಂಟೆಗೆ ಹೆಬ್ರಿ ಪೊಲೀಸ್ ಠಾಣೆ ಉಪನಿರೀಕ್ಷಕ ಜಗನ್ನಾಥ ಟಿ.ಟಿ. ಖಚಿತ ಮಾಹಿತಿ ಮೇರೆಗೆ ಶಿವಪುರ ಗ್ರಾಮದ ಬ್ಯಾಣ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಸವಾರ ನಾಗೇಶ್ ನಾಯಕ್‌ನನ್ನು ವಿಚಾರಿಸಿ, ವಾಹನವನ್ನು ಪರಿಶೀಲಿಸಿದಾಗ ಸೀಟಿನ ಕೆಳಭಾಗದ ಬಾಕ್ಸ್‌ನಲ್ಲಿ 30 ನಾಡ ಬಾಂಬ್ ಗಳು, ಒಂದು ತಲೆಗೆ ಕಟ್ಟುವ ಟಾರ್ಚರ್, ಒಂದು ಚೂರಿ ಹಾಗೂ ರೈನ್‌ಕೋಟ್ ಪ್ತೆಯಾಗಿದ್ದವು ಎಂದು ಎಸ್ಪಿ ತಿಳಿಸಿದರು.

ಈ ಬಗ್ಗೆ ಹೆಚ್ಚಿನ ವಿಚಾರಣೆ ಮಾಡಿದಾಗ ನಾಡ ಬಾಂಬುಗಳನ್ನು ಕಾಡಿನಲ್ಲಿ ಇಟ್ಟು ಕಾಡು ಪ್ರಾಣಿಗಳನ್ನು ಸಾಯಿಸಲು ಹೋಗುತ್ತಿದ್ದು, ಇದನ್ನು ಗುಣಕರ ಶೆಟ್ಟಿಯಿಂದ ಹಣ ಕೊಟ್ಟು ಖರೀದಿಸಿರುವುದಾಗಿ ನಾಗೇಶ್ ನಾಯಕ್ ಹೇಳಿದರು. ಅದರಂತೆ ನಾಗೇಶ್ ನಾಯಕ್‌ನನ್ನು ಬಂಧಿಸಿ, ದ್ವಿಚಕ್ರ ವಾಹನ ಹಾಗೂ 30 ನಾಡ ಬಾಂಬ್ ಗಳನ್ನು ವಶಪಡಿಸಿಕೊಂಡು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನಾವಣೆ ನಿರ್ದೇಶನದಂತೆ ಪ್ರಕರಣದ ಹೆಚ್ಚಿನ ತನಿಖೆ ನಡೆಸಿದ ಕಾರ್ಕಳ ವೃತ್ತ ನಿರೀಕ್ಷಕ ಜಾಯ್ ಅಂತೋನಿ ಮತ್ತು ಹೆಬ್ರಿ ಠಾಣಾಧಿಕಾರಿ ಜಗನ್ನಾಥ ಟಿ.ಟಿ. ಮತ್ತು ಸಿಬ್ಬಂದಿ ನಾಡ ಬಾಂಬ್ ಗಳನ್ನು ತಯಾರಿಸಿ ಸರಬರಾಜು ಮಾಡುತ್ತಿದ್ದ ಗುಣಕರ ಶೆಟ್ಟಿ ಮತ್ತು ಲಕ್ಷ್ಮಣ್ ಶೆಟ್ಟಿ ನ.22ರಂದು ಬಂಧಿಸಿ, ಒಂದು ಬೈಕ್ ಹಾಗೂ 3 ನಾಡ ಬಾಂಬುಗಳನ್ನು ವಶಪಡಿಸಿಕೊಂಡರು.

ಗುಣಕರ ಶೆಟ್ಟಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆತ ನಾಡ ಬಾಂಬ್ ಒಂದಕ್ಕೆ 500 ರೂ.ನಂತೆ 30 ನಾಡ ಬಾಂಬ್ ಗಳನ್ನು 15,000 ರೂ.ಗೆ ನಾಗೇಶ್ ನಾಯಕ್‌ಗೆ ಮಾರಾಟ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಎರಡು ತಿಂಗಳ ಹಿಂದೆ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲೆಯೊಂದರ ಮೈದಾನದಲ್ಲಿ ಸ್ಪೋಟಗೊಂಡ ನಾಡ ಬಾಂಬ್ ಪ್ರಕರಣದ ವಿಚಾರಣೆಯನ್ನು ಕೂಡ ಮಾಡಲಾಗುವುದು ಎಂದು ಎಸ್ಪಿ ತಿಳಿಸಿದರು.

ಇವರು ಕಚ್ಛಾ ಸಾಮಗ್ರಿಗಳನ್ನು ಎಲ್ಲಿಂದ ಖರೀದಿ ಮಾಡುತ್ತಿದ್ದಾರೆಂಬ ಮಾಹಿತಿ ಸಿಕ್ಕಿದೆ. ಅದನ್ನು ಪರಿಶೀಲನೆ ನಡೆಸಲಾಗುವುದು. ಕಾಡುಪ್ರಾಣಿಗಳನ್ನು ಸಾಯಿಸಲು ಈ ಬಾಂಬ್ ಗಳನ್ನು ಬಳಕೆ ಮಾಡುತ್ತಿರುವುದರಿಂದ ಈ ವಿಚಾರವನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೂ ತಿಳಿಸಲಾಗಿದೆ. ಇದರ ಹಿಂದೆ ಇರುವ ನಾಡ ಬಾಂಬ್ ಜಾಲವನ್ನು ಪತ್ತೆ ಮಾಡಲು ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News