ತನ್ನ ಸೋದರನ ಮೂಲಕ ಮೂವರು ಮಕ್ಕಳನ್ನು ಕೊಲ್ಲಿಸಿದ ತಂದೆ
ಪಂಚಕುಲಾ, ನ.22: ಕುರುಕ್ಷೇತ್ರದ ನಿವಾಸಿಯೋರ್ವ ತನ್ನ ಸೋದರ ಸಂಬಂಧಿಯ ಸೂಚನೆಯ ಮೇರೆಗೆ ಆತನ ಮೂವರು ಮಕ್ಕಳನ್ನು ಗುಂಡಿಕ್ಕಿ ಹತ್ಯೆಗೈದು,ಶವಗಳನ್ನು ಪಂಚಕುಲಾದ ಮೋರ್ನಿ ಅರಣ್ಯದಲ್ಲಿ ಎಸೆದಿದ್ದ ಅಮಾನುಷ ಘಟನೆ ಬೆಳಕಿಗೆ ಬಂದಿದೆ.
ಕೈಥಾಲ್‌ನಲ್ಲಿ ಫೋಟೊ ಸ್ಟುಡಿಯೊ ಹೊಂದಿರುವ, ಸರ್ಸಾ ಗ್ರಾಮದ ನಿವಾಸಿ ಸೋನು ಮಲಿಕ್‌ಎಂಬಾತನ ಮಕ್ಕಳಾದ ಸಮೀರ್(11), ಸಿಮ್ರಾನ್(8) ಮತ್ತು ಸಮರ್(3) ಕೊಲೆಯಾಗಿರುವ ನತದೃಷ್ಟರು. ರವಿವಾರ ಈ ತ್ರಿವಳಿ ಹತ್ಯೆಗಳು ನಡೆದಿದ್ದು, ಮಂಗಳವಾರ ಶವಗಳು ಪತ್ತೆಯಾಗಿವೆ. ಸೋನು ಮತ್ತು ಆತನ ಸೋದರ ಸಂಬಂಧಿ ಜಗದೀಪ ಮಲ್ಲಿಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ರವಿವಾರ ಬೆಳಿಗ್ಗೆ ಆಟವಾಡಲೆಂದು ಮನೆಯಿಂದ ಹೊರಬಿದ್ದಿದ್ದ ಮಕ್ಕಳನ್ನು ಕುರುಕ್ಷೇತ್ರ ದಲ್ಲಿ ಗೀತಾ ಜಯಂತಿ ಮಹೋತ್ಸವ ತೋರಿಸುವ ಆಮಿಷವೊಡ್ಡಿ ತನ್ನ ಕಾರಿಗೆ ಹತ್ತಿಸಿಕೊಂಡಿದ್ದ ಜಗದೀಪ 110 ಕಿ.ಮೀ.ದೂರದ ಮೋರ್ನಿ ಅರಣ್ಯಕ್ಕೆ ಕರೆದೊಯ್ದು ನಾಡ ಪಿಸ್ತೂಲಿನಿಂದ ಅತ್ಯಂತ ಸಮೀಪದಿಂದ ಗುಂಡು ಹಾರಿಸಿ ಕೊಂದು ಶವಗಳನ್ನು ಅಲ್ಲಿಯೇ ಎಸೆದು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸೋನುವಿನ ಸೂಚನೆಯಂತೆ ತಾನು ಈ ಕೊಲೆಗಳನು ಮಾಡಿರುವದಾಗಿ ಜಗದೀಪ್ ಪೊಲೀಸರ ವಿಚಾರಣೆ ಸಂದರ್ಭ ತಪ್ಪೊಪ್ಪಿಕೊಂಡಿದ್ದಾನೆ. ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ.
ತ್ರಿವಳಿ ಹತ್ಯೆಗಳ ಉದ್ದೇಶವನ್ನು ಪೊಲೀಸರು ಬಹಿರಂಗಗೊಳಿಸಿಲ್ಲ. ಆದರೆ ತನ್ನ ಮಗನಿಗೆ ವಿವಾಹೇತರ ಸಂಬಂಧವಿದ್ದು, ಅದೇ ಕಾರಣದಿಂದ ಕೊಲೆಗಳು ನಡೆದಿವೆ ಎಂದು ಸೋನುವಿನ ತಂದೆ ಜೀತಾ ಮಲಿಕ್ ಹೇಳಿದ್ದಾರೆ.