ಕಾವೇರಿ ನೀರು ಹಂಚಿಕೆ: ತಮಿಳುನಾಡು ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

Update: 2017-11-22 15:12 GMT

ಹೊಸದಿಲ್ಲಿ, ನ. 22: ಅರುವತ್ಮೂರು ಟಿಎಂಸಿ ನೀರು ಕೊರತೆ ಇರುವ ತನ್ನ ಬಿಲ್ಲಿಗುಂಡುಲು ಜಲಾಶಯಕ್ಕೆ ತತ್‌ಕ್ಷಣ ಕಾವೇರಿ ನದಿ ನೀರು ಹರಿಸಲು ಕರ್ನಾಟಕಕ್ಕೆ ನಿರ್ದೇಶಿಸುವಂತೆ ಕೋರಿ ತಮಿಳುನಾಡು ಸರಕಾರ ಮಂಗಳವಾರ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

 ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠದ ಮುಂದೆ ನೀರಿನ ಕೊರತೆ ಇದೆ ಎಂದು ಹೇಳಿದ ತಮಿಳುನಾಡು ಸರಕಾರದ ಪರ ನ್ಯಾಯವಾದಿ ಜಿ. ಉಮಾಪತಿ, ತಮಿಳುನಾಡಿನ ಕಾವೇರಿ ಜಲಾನಯನ ಪ್ರದೇಶದಲ್ಲಿ ಬೆಳೆ ಉಳಿಸಲು ಮುಂದಿನ 10 ದಿಗಳ ಒಳಗೆ ಕೊರತೆ ಇರುವ ನೀರಿನ ಪ್ರಮಾಣದಲ್ಲಿ ಕನಿಷ್ಠ 30 ಟಿಎಂಸಿ ನೀರನ್ನು ಬಿಲ್ಲಿಗುಂಡುಲು ಜಲಾಶಯಕ್ಕೆ ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿದರು.

ಮೂರು ರಾಜ್ಯಗಳಿಗೆ ನೀರು ಹಂಚಿಕೆ ಕುರಿತಂತೆ 2007ರಲ್ಲಿ ಕಾವೇರಿ ನ್ಯಾಯಾಧಿಕರಣ ನೀಡಿದ ತೀರ್ಪು ಪ್ರಶ್ನಿಸಿ ತಮಿಳುನಾಡು, ಕರ್ನಾಟಕ ಹಾಗೂ ಕೇರಳ ಸಲ್ಲಿಸಿದ ಮನವಿಯನ್ನು ಸೆಪ್ಟಂಬರ್‌ನಲ್ಲಿ ನ್ಯಾಯಮೂರ್ತಿ ಮಿಶ್ರಾ (ಆಗಿನ) ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಕಾಯ್ದಿರಿಸಿತ್ತು.

ಇದನ್ನು ಉಲ್ಲೇಖಿಸಿ ಮುಖ್ಯ ನ್ಯಾಯಮೂರ್ತಿ ಮಿಶ್ರಾ, ತೀರ್ಪು ಕಾಯ್ದಿರಿಸಿರುವುದರಿಂದ ನ್ಯಾಯಾಲಯ ಯಾವುದೇ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ ಎಂದು ಉಮಾಪತಿ ಅವರಿಗೆ ಸ್ಪಷ್ಟಪಡಿಸಿತು.

ಆದಾಗ್ಯೂ, ತಮಿಳುನಾಡಿನ ನಿಜವಾದ ಪರಿಸ್ಥಿತಿ ಬಗ್ಗೆ ಪರಿಶೀಲಿಸುವಂತೆ ಪೀಠ ಕರ್ನಾಟಕ ಪರ ನ್ಯಾಯವಾದಿ ಫಾಲಿ ನಾರಿಮನ್‌ಗೂ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News