ಪದ್ಮಾವತಿ ವಿವಾದ: ಚಿತ್ರ ನಿಷೇಧಕ್ಕೆ ಮಹಾರಾಷ್ಟ್ರ ಬಿಜೆಪಿ ಸಚಿವರ ಆಗ್ರಹ

Update: 2017-11-22 14:17 GMT

ಮುಂಬೈ, ನ.22: ಮಹಾರಾಷ್ಟ್ರ ಪ್ರವಾಸೋದ್ಯಮ ಸಚಿವ ಜಯಕುಮಾರ್ ರಾವಲ್ ಪದ್ಮಾವತಿ ಸಿನಿಮಾವನ್ನು ಮೇಲೆ ರಾಜ್ಯದಲ್ಲಿ ನಿಷೇಧಿಸಬೇಕೆಂದು ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಸೆನ್ಸಾರ್ ಮಂಡಳಿ (ಸಿಬಿಎಫ್‌ಸಿ) ಗೆ ಪತ್ರವನ್ನು ಬರೆದಿರುವ ರಾವಲ್, ಪದ್ಮಾವತಿ ಸಿನಿಮಾವನ್ನು ಇತಿಹಾಸತಜ್ಞರಿಗೆ ತೊೀರಿಸಿ ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.

ಪದ್ಮಾವತಿ ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದ್ದರೆ ಅದನ್ನು ರಾಜ್ಯದಲ್ಲಿ ನಿಷೇಧಿಸುವಂತೆ ನಾನು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದೇನೆ. ಚಿತ್ರದಲ್ಲಿ ಯಾವುದಾದರೂ ಆಕ್ಷೇಪಾರ್ಹ ದೃಶ್ಯಗಳಿದ್ದರೆ ಬಿಡುಗಡೆಗೂ ಮುನ್ನ ಅವುಗಳನ್ನು ತೆಗೆದುಹಾಕಬೇಕು ಎಂದು ರಾವಲ್ ತಿಳಿಸಿದ್ದಾರೆ.

ಪದ್ಮಾವತಿಗೆ ನೀಡಿದ ಪ್ರಮಾಣ ಪತ್ರವನ್ನು ರದ್ದುಪಡಿಸುವಂತೆ ಸೆನ್ಸಾರ್ ಮಂಡಳಿಯಲ್ಲಿ ವಿನಂತಿಸುತ್ತೇನೆ. ಚಿತ್ರವನ್ನು ಇತಿಹಾಸತಜ್ಞರನ್ನು ಹೊಂದಿರುವ ಸಮಿತಿಗೆ ಪ್ರದರ್ಶಿಸಬೇಕು ಲಕ್ಷಾಂತರ ಜನರಿಂದ ಪೂಜಿಸಲ್ಪಡುವ ರಾಣಿ ಪದ್ಮಾವತಿಯ ಪರಾಕ್ರಮ ಮತ್ತು ಬಲಿದಾನವನ್ನು ನಿರ್ಲಕ್ಷಿಸುವ ಮತ್ತು ಅಪವೌಲ್ಯಗೊಳಿಸುವ ಯಾವುದಾದರೂ ಸಂಭಾಷಣೆ, ಕತೆ ಮತ್ತು ದೃಶ್ಯಗಳಲ್ಲಿರುವ ಕಲ್ಪನಾತ್ಮಕ ಅಂಶಗಳನ್ನು ತೆಗೆದು ಹಾಕಬೇಕು ಎಂದು ಪತ್ರದಲ್ಲಿ ರಾವಲ್ ಮನವಿ ಮಾಡಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ರಣ್‌ವೀರ್ ಸಿಂಗ್ ಮತ್ತು ಶಹೀದ್ ಕಪೂರ್ ಮುಖ್ಯಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಾಣಿ ಪದ್ಮಾವತಿ ಮತ್ತು ಅಲ್ಲಾವುದ್ದೀನ್ ಖಿಲ್ಜಿ ಮಧ್ಯೆ ಕಾಲ್ಪನಿಕ ಪ್ರೇಮದೃಶ್ಯವೊಂದನ್ನು ಚಿತ್ರೀಕರಿಸಲಾಗಿದೆ ಎಂಬ ವದಂತಿಯಿಂದ ಆಕ್ರೋಶಿತರಾದ ವಿವಿಧ ರಜಪೂತ ಮತ್ತು ಇತರ ಸಂಘಟನೆಗಳು ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿರುವುದರಿಂದ ಜನರ ಭಾವನೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿವೆ. ಆದರೆ ರಾಣಿ ಪದ್ಮಾವತಿಯ ಅಸ್ತಿತ್ವದ ಬಗ್ಗೆಯೇ ಇತಿಹಾಸತಜ್ಞರಲ್ಲಿ ಭಿನ್ನಾಭಿಪ್ರಾಯಗಳಿವೆ.

ನಟ ರಣ್‌ವೀರ್ ಸಿಂಗ್ ಅಲ್ಲಾವುದ್ದೀನ್ ಖಿಲ್ಜಿಯ ಪಾತ್ರವನ್ನು ನಿಭಾಯಿಸಬಾರದಿತ್ತು ಎಂದು ಹೇಳಿರುವ ರಾವಲ್, ಆತನಿಗೆ ತಾನು ಯಾವ ಪಾತ್ರವನ್ನು ಮಾಡುತ್ತಿದ್ದೇನೆ ಎಂಬ ಬಗ್ಗೆ ಅರಿವಿರಬೇಕಿತ್ತು. ಈ ಚಿತ್ರದಲ್ಲಿ ಖಿಲ್ಜಿಯನ್ನು ಹೀರೋನಂತೆ ಬಿಂಬಿಸಲಾಗಿದೆ ಮತ್ತು ಈಗಿನ ತಲೆಮಾರು ಸಿನಿಮಾಗಳನ್ನು ನಂಬುತ್ತದೆ. ಅವರು ಖಿಲ್ಜಿ ಒಬ್ಬ ಹೀರೊ ಎಂದು ಭಾವಿಸಬೇಕೇ? ಎಂದು ಪ್ರಶ್ನಿಸಿದ್ದಾರೆ.

 ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಈಗಾಗಲೇ ಪದ್ಮಾವತಿ ಸಿನಿಮಾದ ವಿರುದ್ಧ ಮಾತನಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News