ರಾಹುಲ್ ವಿರುದ್ಧದ ಅರ್ಜಿ ತಳ್ಳಿಹಾಕಿದ ಹೈಕೋರ್ಟ್

Update: 2017-11-22 14:54 GMT

 ಹೊಸದಿಲ್ಲಿ, ನ.22: ರಾಹುಲ್ ಗಾಂಧಿ ತಮಗೆ ಒದಗಿಸಲಾಗಿರುವ ಎಸ್‌ಪಿಜಿ ಭದ್ರತೆಯನ್ನು ಮೀರುವ ಮೂಲಕ ಸ್ವಯಂ ಅಪಾಯಕ್ಕೆ ತಮ್ಮನ್ನು ಒಡ್ಡಿಕೊಂಡಿದ್ದಾರೆ . ಈ ರೀತಿ ಮಾಡದಂತೆ ಅವರಿಂದ ಪ್ರಮಾಣಪತ್ರ ಪಡೆಯಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ತಳ್ಳಿಹಾಕಿದೆ.

   ಮುಂಬೈ ಬಿಜೆಪಿ ವಕ್ತಾರ ತಹಿನ್ ಎ.ಸಿನ್ಹ ಅವರು ಸಲ್ಲಿಸಿದ್ದ ಅರ್ಜಿ ಸಮರ್ಥನೀಯವಲ್ಲ ಎಂದು ಪ್ರಭಾರಿ ಪ್ರಧಾನ ನ್ಯಾಯಮೂರ್ತಿ ಗೀತಾ ಮಿತ್ತಲ್ ಹಾಗೂ ಸಿ.ಹರಿಶಂಕರ್ ಅವರಿದ್ದ ಹೈಕೋರ್ಟ್ ನ್ಯಾಯಪೀಠವು ಅಭಿಪ್ರಾಯ ವ್ಯಕ್ತಪಡಿಸಿದೆ. ಭದ್ರತೆಯ ವಿಷಯದ ಬಗ್ಗೆ ನಿರ್ಧರಿಸಲು ಇದು ಸೂಕ್ತ ವೇದಿಕೆಯಲ್ಲ . ಭದ್ರತೆಯ ಕುರಿತ ವಿಷಯದಲ್ಲಿ ಸರಕಾರ ತೆಗೆದುಕೊಳ್ಳುವ ನಿರ್ಧಾರವನ್ನು ನಾವು ಅವಲಂಬಿಸಿದ್ದೇವೆ ಎಂದು ನ್ಯಾಯಪೀಠ ತಿಳಿಸಿತು. ವಿಶೇಷ ಭದ್ರತಾ ಪಡೆ (ಎಸ್‌ಪಿಜಿ) ಕಾಯ್ದೆಯನ್ನು ಉಲ್ಲಂಘಿಸುವಂತಿಲ್ಲ ಹಾಗೂ ಎಸ್‌ಪಿಜಿ ಭದ್ರತೆಯನ್ನು ಮೀರಿ ತಮ್ಮನ್ನು ಅಪಾಯಕ್ಕೆ ಒಡ್ಡಿಕೊಳ್ಳುವಂತಿಲ್ಲ. ಈ ಬಗ್ಗೆ ಹೈಕೋರ್ಟ್ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕು. ಅಲ್ಲದೆ , ಇನ್ನು ಮುಂದೆ ಎಸ್‌ಪಿಜಿ ಭದ್ರತೆಯಿಲ್ಲದೆ ಪ್ರವಾಸ ನಡೆಸುವುದಿಲ್ಲ ಎಂದು ರಾಹುಲ್ ಪ್ರಮಾಣಪತ್ರ ಸಲ್ಲಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು.

 ಕೇಂದ್ರ ಸರಕಾರದ ಪರ ವಕೀಲ ಅನಿಲ್ ಸೋದಿ ಮಾತನಾಡಿ, ಕೇಂದ್ರ ಸರಕಾರಕ್ಕೂ ರಾಹುಲ್ ಭದ್ರತೆಯ ಕುರಿತು ಕಳವಳವಿದೆ. ಆದರೆ ಭದ್ರತೆಯನ್ನು ಮೀರುವುದು ಬೇಜವಾಬ್ದಾರಿಯ ನಡೆಯಾಗಿದೆ . ಅವರಿಗೇನಾದರೂ ಆದರೆ ಆಗ ಕೇಂದ್ರ ಸರಕಾರವನ್ನು ಹೊಣೆಗಾ     ರರನ್ನಾಗಿಸಲಾಗುತ್ತದೆ ಎಂದರು. ಆಗಸ್ಟ್‌ನಲ್ಲಿ ಗುಜರಾತ್‌ನಲ್ಲಿ ಪ್ರವಾಹಪೀಡಿತ ಪ್ರದೇಶಗಳಿಗೆ ರಾಹುಲ್ ಭೇಟಿ ನೀಡಿದ ಸಂದರ್ಭ ಅವರು ಸಂಚರಿಸುತ್ತಿದ್ದ ಕಾರಿನ ಮೇಲೆ ಕಲ್ಲೆಸೆದ ಘಟನೆ ನಡೆದಿತ್ತು. ಅಲ್ಲದೆ ರಾಹುಲ್ ವಿದೇಶ ಪ್ರವಾಸದ ಸಂದರ್ಭವೂ ಭದ್ರತೆಯ ಶಿಷ್ಟಾಚಾರ ಪಾಲಿಸುತ್ತಿಲ್ಲ ಎಂದು ಈ ಹಿಂದೆಯೂ ಬಿಜೆಪಿ ಮುಖಂಡರು ದೂರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News