ಬೋಸ್ನಿಯ ನರಹಂತಕ ಸೇನಾಧಿಕಾರಿಗೆ ಜೀವಾವಧಿ

Update: 2017-11-22 15:25 GMT

ಹೇಗ್ (ನೆದರ್‌ಲ್ಯಾಂಡ್ಸ್), ನ. 22: ಬೋಸ್ನಿಯಾದ ಆಂತರಿಕ ಯುದ್ಧದ ವೇಳೆ ಸಾಮೂಹಿಕ ಹತ್ಯಾಕಾಂಡ ಮತ್ತು ಜನಾಂಗೀಯ ನಿರ್ಮೂಲನೆ ನಡೆಸಿರುವುದಕ್ಕಾಗಿ ಬೋಸ್ನಿಯ ಸೇನೆಯ ಮಾಜಿ ದಂಡನಾಯಕ ರಟ್ಕೊ ಮ್ಲಾಡಿಕ್‌ಗೆ ವಿಶ್ವಸಂಸ್ಥೆಯ ನ್ಯಾಯಮಂಡಳಿಯೊಂದು ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ಆತನ ವಿರುದ್ಧದ ಜನಾಂಗೀಯ ಹತ್ಯೆ ಮತ್ತು ಮಾನವತೆಯ ವಿರುದ್ಧದ ಅಪರಾಧಗಳು ಸಾಬೀತಾಗಿವೆ ಎಂದು ನ್ಯಾಯಮಂಡಳಿ ಹೇಳಿದೆ.

‘ಇದೆಲ್ಲ ಸುಳ್ಳು, ನೀವೆಲ್ಲ ಸುಳ್ಳುಗಾರರು’ ಎಂಬುದಾಗಿ ನ್ಯಾಯಾಲಯದಲ್ಲಿ ಕೂಗಿದ 74 ವರ್ಷದ ಮ್ಲಾಡಿಕ್‌ನನ್ನು ಹೊರಗೆ ಕರೆದೊಯ್ಯಲಾಯಿತು. ಅದಾದ ನಿಮಿಷಗಳ ಬಳಿಕ ತೀರ್ಪು ಪ್ರಕಟಿಸಲಾಯಿತು.

ಆತನ ವಿರುದ್ಧದ 11 ಆರೋಪಗಳ ಪೈಕಿ 10 ಸಾಬೀತಾಗಿವೆ ಎಂದು ನ್ಯಾಯಾಲಯ ತಿಳಿಸಿತು.

ಸ್ರೆಬ್ರೆನಿಕದಲ್ಲಿ 8,000 ಮುಸ್ಲಿಮ್ ಪುರುಷರು ಮತ್ತು ಬಾಲಕರನ್ನು ಕೊಂದಿರುವುದು ಹಾಗೂ ಬೋಸ್ನಿಯ ರಾಜಧಾನಿ ಸರಜೇವೊಗೆ ಮುತ್ತಿಗೆ ಹಾಕಿರುವುದು ಮುಂತಾದ ಆರೋಪಗಳನ್ನು ಆತನ ವಿರುದ್ಧ ಹೊರಿಸಲಾಗಿದೆ. ಸರೆಜಾವೊಗೆ ಹಾಕಿದ ಮುತ್ತಿಗೆಯ 43 ತಿಂಗಳ ಅವಧಿಯಲ್ಲಿ ಶೆಲ್ ದಾಳಿ ಹಾಗೂ ಗುಂಡು ಹಾರಾಟದಲ್ಲಿ 11,000 ನಾಗರಿಕರು ಮೃತಪಟ್ಟಿದ್ದಾರೆ.

‘‘ಆತ ನಡೆಸಿದ ಅಪರಾಧಗಳು ಮಾನವಕುಲಕ್ಕೆ ಗೊತ್ತಿರುವ ಅತ್ಯಂತ ಪೈಶಾಚಿಕ ಕೃತ್ಯಗಳಾಗಿವೆ. ಜನಾಂಗೀಯ ಹತ್ಯೆ ಮತ್ತು ಸಾಮೂಹಿಕ ವಧೆ ಮಾನವತೆಯ ವಿರುದ್ಧದ ಅಪರಾಧಗಳಾಗಿವೆ’’ ಎಂದು ನ್ಯಾಯಮಂಡಳಿಯ ಮುಖ್ಯ ನ್ಯಾಯಾಧೀಶ ಆಲ್ಫೋನ್ಸ್ ಓರಿ ತೀರ್ಪಿನಲ್ಲಿ ಹೇಳಿದರು.

2ನೆ ಮಹಾಯುದ್ಧದ ಬಳಿಕದ ಭೀಕರ ನರಮೇಧ

ಸ್ರೆಬ್ರೆನಿಕದಲ್ಲಿ ಮ್ಲಾಡಿಕ್ ನೇತೃತ್ವದ ಸೈನಿಕರು ಪುರುಷರು ಮತ್ತು ಬಾಲಕರನ್ನು ಮಹಿಳೆಯರಿಂದ ಬೇರ್ಪಡಿಸಿ ಬಸ್‌ಗಳಲ್ಲಿ ಹೊರಗೆ ಕರೆದೊಯ್ಯಲಾಯಿತು ಹಾಗೂ ಬಳಿಕ ಅವರನ್ನು ಗುಂಡು ಹಾರಿಸಿ ಕೊಲ್ಲಲಾಯಿತು. ಇದು ಎರಡನೆ ಮಹಾಯುದ್ಧದ ಬಳಿಕ ಯುರೋಪ್‌ನಲ್ಲಿ ನಡೆದ ಅತ್ಯಂತ ಭೀಕರ ನರಮೇಧ ಎಂದು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News