×
Ad

ಅಧಿಕಾರಕ್ಕೆ ಬಂದರೆ ಚಿತ್ರಮಂದಿರ ನಿರ್ಮಾಣ: ಪಾಲೆಮಾರ್‌

Update: 2017-11-22 21:27 IST

ಮಂಗಳೂರು, ನ. 22: ರಾಜ್ಯದಲ್ಲಿ ಬಿಜೆಪಿ ನೇತೃತ್ವ ಸರಕಾರ ಅಧಿಕಾರ ಬಂದರೆ ಚಿತ್ರ ಕಲಾವಿದರ ಬೇಡಿಕೆಯಂತೆ ದ.ಕ. ಜಿಲ್ಲೆಯಲ್ಲಿ ಚಿತ್ರಮಂದಿರಗಳನ್ನು ನಿರ್ಮಾಣ ಮಾಡುವುದಾಗಿ ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಹೇಳಿದ್ದಾರೆ.

ನಗರದ ಎ.ಬಿ.ಶೆಟ್ಟಿ ವೃತ್ತ ಬಳಿಯ ರಾಘವೇಂದ್ರ ಸಂಕೀರ್ಣದ 3ನೆ ಮಹಡಿಯಲ್ಲಿ ಬುಧವಾರ ಕೋಸ್ಟಲ್‌ವುಡ್ ಕಲಾವಿದರ ಮತ್ತು ತಂತಜ್ಞರ ಸಾಂಸ್ಕೃತಿಕ ಒಕ್ಕೂಟ (ಕ್ಯಾಟ್‌ಕ) ನೂತನ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಲೆಗೆ ರಾಜ್ಯ ಸರಕಾರದ ಪ್ರೋತ್ಸಾಹ ಸಾಲದು. ಅವರಿಗೆ ಪಿಂಚಣಿ ಒದಗಿಸುವ ವ್ಯವಸ್ಥೆಯಾಗಬೇಕು. ದ.ಕ. ಜಿಲ್ಲೆಯಲ್ಲಿ ಚಿತ್ರಮಂದಿರಗಳ ಕೊರತೆ ಇದ್ದು, ನೂತನ ಚಿತ್ರಮಂದಿಗಳ ನಿರ್ಮಾಣ ಆಗಬೇಕೆಂಬ ಕಲಾವಿದರ ಬೇಡಿಕೆಯನ್ನು ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಈಡೇರಿಸುತ್ತೇನೆ ಎಂದರು.

ಹಂಚಿ ಹೋಗಿರುವ ಕಲಾವಿದರೆಲ್ಲರೂ ಒಗ್ಗೂಡಿ ಒಂದೆಡೆ ಸೇರಲು ಒಕ್ಕೂಟ ಅಸ್ತಿತ್ವಕ್ಕೆ ಬಂದಿರುವುದು ಸಂತೋಷದ ವಿಷಯ. ಕಲಾವಿಕರ ಒಕ್ಕೂಟದ ಅಗತ್ಯದ ಬಗ್ಗೆ ನಾನು ಹಿಂದಿನಿಂದಲೇ ಒತ್ತಾಯಿಸುತ್ತಿದ್ದೆ. ಒಕ್ಕೂಟ ಅಥವಾ ಸಂಘ, ಸಂಸ್ಥೆಗಳು ಕೇವಲ ಪ್ರತಿಭಟನೆಗಳನ್ನು ನಡೆಸಲು ಮಾತ್ರ ಸೀಮಿತವಾಗಬಾರದು. ಪ್ರೇಕ್ಷರಿಗೆ ಏನು ಬೇಕು. ಅವರು ಏನನ್ನು ಬಯಸುತ್ತಾರೆ ಎಂಬುದರ ಬಗ್ಗೆ ಕಲಾವಿದರು ಚರ್ಚೆ ನಡೆಸಬೇಕು. ಗುಣಮಟ್ಟದ ಚಿತ್ರಗಳನ್ನು ನೀಡಬೇಕು. ಆರೋಗ್ಯಕರ ಕಲೆಗೆ ಪ್ರಾಮುಖ್ಯತೆ ನೀಡುವಂತಾಗಬೇಕು ಎಂದು ಪಾಲೆಮಾರ್ ಹೇಳಿದರು.

ಮೇಯರ್ ಕವಿತಾ ಸನಿಲ್ ಮಾತನಾಡಿ, ನನ್ನಿಂದ ಸಾಧ್ಯವಾದಷ್ಟು ಸಹಾಯವನ್ನು ನೀಡಿದ್ದೇನೆ. ಮುಂದೆಯೂ ಪಾಲಕೆಯ ವತಿಯಿಂದ ಸಹಕಾರ ನೀಡಲಾಗುವುದು. ಇದೀಗ ಒಕ್ಕೂಟವು ನೂತನ ಕಚೇರಿಯನ್ನು ತೆರೆಯುವ ಮೂಲಕ ಚರ್ಚೆಗಳಿಗೆ ಅವಕಾಶ ಕಲ್ಪಿಸಿದಂತಾಗಿದೆ. ಈ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾಸ ಸಿಗಲು ಸಾಧ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಕದ್ರಿ ಮಹಾಗಣಪತಿ ದೇವಸ್ಥಾನದ ಶಂಕರ ಅಲೆವೂರು, ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ, ಕಾರ್ಪೊರೇಟರ್ ದಿವಾಕರ ಪಾಂಡೇಶ್ವರ, ಕ್ಯಾಟ್‌ಕದ ಕಾನೂನು ಸಲಹೆಗಾರ ಹಾಗೂ ವಕೀಲ ಮೋಹನ್‌ದಾಸ್ ರೈ, ತುಳು ನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News