×
Ad

ಉಡುಪಿ: ಅನಿಲಭಾಗ್ಯ ಯೋಜನೆಗೆ 11,059 ಫಲಾನುಭವಿಗಳು

Update: 2017-11-22 22:50 IST

ಉಡುಪಿ, ನ.22: ರಾಜ್ಯ ಸರಕಾರ ಅಡುಗೆ ಅನಿಲ ಹೊಂದಿಲ್ಲದ ಬಿಪಿಎಲ್ ಕಾರ್ಡ್‌ದಾರರು, ಅರಣ್ಯ ನಿವಾಸಿಗಳು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಪ.ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ನೀಡುವ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಗೆ ಜಿಲ್ಲೆಯಲ್ಲಿ 11,059 ಫಲಾನುಭವಿಗಳನ್ನು ಆಯ್ಕೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಬುಧವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆ ಅನುಷ್ಠಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಜಿಲ್ಲೆಯಲ್ಲಿ ಅರ್ಹ ಅನಿಲರಹಿತರ ಪಟ್ಟಿಯನ್ನು ವಿಧಾನಸಭಾ ಕ್ಷೇತ್ರವಾರು ಹಂಚಿಕೆ ಮಾಡಿ, ಸಂಬಂಧಪಟ್ಟ ಶಾಸಕರ ಅನುಮೋದನೆಗೆ ಸಲ್ಲಿಸಿದ್ದು, ಶಾಸಕರ ಕಚೇರಿಯಲ್ಲಿ ಅನುಮೋದನೆಗೊಂಡಿರುವ ಫಲಾನುಭವಿಗಳ ಪಟ್ಟಿಯನ್ನು ಪಡೆದು 2 ದಿನದೊಳಗೆ ಆಹಾರ ಇಲಾಖೆಗೆ ಸಲ್ಲಿಸುವಂತೆ,ಆಹಾರ ನಿರೀಕ್ಷಕರಿಗೆ ಜಿಲ್ಲಾಧಿಕಾರಿ ಸೂಚನೆಗಳನ್ನು ನೀಡಿದರು.

ಅರ್ಜಿ ಸ್ವೀಕಾರದ ಬಳಿಕ ಫಲಾನುಭವಿ ಕುಟುಂಬದ ಸದಸ್ಯರು ಈಗಾಗಲೇ ಅನಿಲ ಸಂಪರ್ಕ ಪಡೆದಿರುವರೋ ಎಂಬುದನ್ನು ಪರಿಶೀಲನೆ ನಡೆಸುವಂತೆುೂ ಅವರು ಸಂಬಂಧಿತರಿಗೆ ತಿಳಿಸಿದರು.

ಪ್ರತಿ ಫಲಾನುಭವಿಗೆ ಸಿಲೆಂಡರ್ ಭದ್ರತಾ ಠೇವಣಿ, ರೆಗ್ಯುಲೇಟರ್ ಭದ್ರತಾ ಠೇವಣಿ, ಸುರಕ್ಷಾ ಹೋಸ್, 2 ಬರ್ನರ್ ಗ್ಯಾಸ್ ಸ್ಟೌವ್, 2 ಸಿಲೆಂಡರ್ ತಪಾಸಣೆ, ಜೋಡಣಾ ವೆಚ್ಚ ಸೇರಿ 4,040 ರೂ.ವನ್ನು ಸರಕಾರ ನಿಗದಿಪಡಿಸಿದೆ. ಸಂಪರ್ಕ ನೀಡುವ ಸಮಯದಲ್ಲಿ ಬದಲಾಗುವ ಸಿಲೆಂಡರ್ ದರ ಮತ್ತು ಜಿಎಸ್‌ಟಿ ಸಂಬಂಧಿಸಿದಂತೆ ಆಹಾರ ಇಲಾಖೆಯಿಂದ ಮಾಹಿತಿಯನ್ನು ಪಡೆದುಕೊಳ್ಳಲಾಗುವುದು ಎಂದು ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು.

ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಎಂ.ಆರ್ ಭಟ್, ವಿವಿಧ ಇಲಾಖೆಗಳ ಅಧಿಕಾರಿಗಳು, ಅನಿಲ ಕಂಪೆನಿಗಳ ಮಾರಾಟ ಅಧಿಕಾರಿಗಳು, ಅನಿಲ ವಿತರಕರು, ಅಡುಗೆ ಅನಿಲ ಸ್ಟೌವ್ ಸರಬರಾಜು ಕಂಪೆನಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News