ಸಾಹಿತಿ ಪ್ರೊ.ಅಬ್ದುಲ್ ಬಶೀರ್‌ಗೆ ‘ಅಕಲಂಕ ಪ್ರಶಸ್ತಿ’ ಪ್ರದಾನ
ಉಡುಪಿ, ನ.22: ನಾವು ಮೊದಲು ಮಾನವರಾಗಬೇಕು. ಬೇರೆಯವರಿಗೆ ಪ್ರೀತಿ, ದಯೆ, ಅನುಕಂಪ ತೋರಿಸಬೇಕು. ಕನ್ನಡ ಬೆಳೆಯಲು ಕೇವಲ ಬರೆದರೆ ಸಾಲದು. ಅದು ಅಂತರಂಗದಲ್ಲಿ ಉಳಿಯಬೇಕು ಎಂದು ಬೆಂಗಳೂರಿನ ಹಿರಿಯ ಸಾಹಿತಿ ಪ್ರೊ.ಜಿ.ಅಬ್ದುಲ್ ಬಶೀರ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬುಧವಾರ ಆಯೋಜಿಸಲಾದ ಡಾ.ಉಪ್ಪುಂಗಳ ರಾಮ ಭಟ್ ಮತ್ತು ಶಂಕರಿ ಆರ್.ಭಟ್ ಅವರ ಅಕಲಂಕ ದತ್ತಿ ಕಾರ್ಯಕ್ರಮದಲ್ಲಿ ‘ಅಕಲಂಕ ದತ್ತಿ ಪುರಸ್ಕಾರ’ವನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.
ಬೆಂಗಳೂರಿನಲ್ಲಿ ಬೇರೆ ರಾಜ್ಯಗಳ ಜನ ತುಂಬಿ ಹೋಗಿದ್ದಾರೆ. ಕೆಲವು ಪ್ರದೇಶ ಗಳಲ್ಲಿ ಕನ್ನಡವೇ ಇಲ್ಲವಾಗಿದೆ. ಬ್ಯಾಂಕ್ ಹಾಗೂ ರೈಲ್ವೆ ಇಲಾಖೆಗಳಲ್ಲಿ ಹಿಂದಿ ಹಾಗೂ ಇಂಗ್ಲೀಷ್ ಭಾಷೆಯ ಹೇರಿಕೆ ಮಾಡಲಾಗುತ್ತಿದೆ. ಇಲ್ಲಿ ಕನ್ನಡ ಮಾಯವಾಗಿದೆ. ನಮಗೆ ಬೇರೆ ಭಾಷೆಗಳ ಬಗ್ಗೆ ಗೌರವ ಇದೆ. ಆದರೆ ನಮ್ಮ ಮನೆಯಲ್ಲಿ ನಮ್ಮ ತಾಯಿಯನ್ನು ಹೊರಗೆ ಹಾಕಿ ಬೇರೆ ತಾಯಿ ಬಂದು ಕೂತರೆ ನಾವು ಒಪ್ಪುದಿಲ್ಲ ಎಂದರು.
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಜಾರಿಗೆ ತರುವ ಮಹತ್ತರ ಜವಾಬ್ದಾರಿ ಸರಕಾರದ ಮೇಲಿದೆ. ಆಗ ಮಾತ್ರ ಕನ್ನಡ ಭಾಷೆಗೆ ಬೆಲೆ ಮತ್ತು ಗೌರವ ಸಿಗಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.
ಪ್ರಶಸ್ತಿಯನ್ನು ಹಿರಿಯ ಸಾಹಿತಿ ಹಾಗೂ ದತ್ತಿ ದಾನಿ ಡಾ.ಉಪ್ಪುಂಗಳ ರಾಮ ಭಟ್ ಪ್ರದಾನ ಮಾಡಿದರು. ಕಾರ್ಯಕ್ರಮವನ್ನು ಗಾಯಕ ಎಚ್.ಚಂದ್ರ ಶೇಖರ್ ಕೆದ್ಲಾಯ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ನೀಲಾ ವರ ಸುರೇಂದ್ರ ಅಡಿಗ ವಹಿಸಿದ್ದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಡಾ.ಸಂಧ್ಯಾ ನಂಬಿಯಾರ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿದೇವಿ, ಕಸಾಪ ಉಡುಪಿ ತಾಲೂಕು ಅಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ ಉಪಸ್ಥಿತರಿದ್ದರು. ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಸೂರಾಲು ನಾರಾಯಣ ಮಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.