×
Ad

ಕುಮಾರಧಾರಾ ನದಿಯಲ್ಲಿ ಸ್ನಾನಕ್ಕಿಳಿದ ವಿದ್ಯಾರ್ಥಿ ನೀರುಪಾಲು

Update: 2017-11-22 23:17 IST

ಪುತ್ತೂರು, ನ. 22: ಸಹಪಾಠಿಗಳೊಂದಿಗೆ ಕುಮಾರಧಾರಾ ನದಿಯಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿಯೊಬ್ಬ ನೀರುಪಾಲಾದ ಘಟನೆ ಬುಧವಾರ ಸಂಜೆ ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಸಮೀಪದ ಕಠಾರ ಕೊಡಿಮರ ಎಂಬಲ್ಲಿ ನಡೆದಿದೆ.

ಪುತ್ತೂರು - ಉಪ್ಪಿನಂಗಡಿ ಮದ್ಯೆ ಇರುವ ಬೆಳ್ಳಿಪ್ಪಾಡಿ ಗ್ರಾಮದ ಕಟಾರ ಸಮೀಪದ ಕೂಡಮರ ಎಂಬಲ್ಲಿ ಈಜಲು ಹೋಗಿ ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಹೇಮಂತ್ (19) ಎಂಬವರು ನೀರುಪಾಲಾಗಿದ್ದಾರೆ. ಹೇಮಂತ್ ಮೂಲತಃ ಶಿವಮೊಗ್ಗ ಜಿಲ್ಲೆಯವರಾಗಿದ್ದು, ಕುಂದಾಪುರ ತಾಲೂಕಿನ ಸಿದ್ದಾಪುರದಿಂದ ಶಿವಮೊಗ್ಗ ಜಿಲ್ಲೆ ಪ್ರವೇಶಿಸುವ ಪ್ರದೇಶದ ನಿವಾಸಿ ಎಂದು ಗೊತ್ತಾಗಿದೆ. ಪರಮೇಶ್ವರ ನಾಯಕ ಎಂಬವರ ಪುತ್ರರಾದ ಇವರು ಪುತ್ತೂರಿನಲ್ಲಿ ಪೇಯಿಂಗ್ ಗೆಸ್ಟ್ ಆಗಿ ವಾಸ್ತವ್ಯವಿದ್ದು ಎಂಜಿನಿಯರಿಂಗ್ ಕಲಿಯುತ್ತಿದ್ದಾರೆ.

ತನ್ನ ಸಹಪಾಠಿಗಳಾದ ಶ್ರೇಯಸ್, ಮೋಕ್ಷಿತ್ ಕುಮಾರ್, ಮಹಮ್ಮದ್ ಇರ್ಷಾದ್ ಮತ್ತು ಅವಿನಾಶ್ ಜತೆಗೆ ಬುಧವಾರ ಸಂಜೆ ಕುಮಾರಧಾರಾ ನದಿಗೆ ಸ್ನಾನಕ್ಕೆಂದು ತೆರಳಿದ್ದರು. ನೀರು ಪಾಲಾದ ಹೇಮಂತ್ ಮತ್ತು ಮೋಕ್ಷಿತ್ ಹಾಗೂ ಶ್ರೆಯಸ್ ಅವರು ನೆಹರೂ ನಗರದಲ್ಲಿ ಪಿ.ಜಿ.ಯಲ್ಲಿ ವಾಸ್ತವ್ಯ ಹೂಡಿದ್ದರು. ಮತ್ತೊಬ್ಬ ವಿದ್ಯಾರ್ಥಿ ಅವಿನಾಶ್ ಪುತ್ತೂರಿನ ಬನ್ನೂರು ನಿವಾಸಿ. ಇನ್ನೊಬ್ಬ ಮಹಮ್ಮದ್ ಇರ್ಷಾದ್ ಪುತ್ತೂರಿನ ಪಡ್ನೂರು ನಿವಾಸಿ. ಇವರಿಬ್ಬರೂ ಮನೆಯಿಂದಲೇ ನಿತ್ಯ ಕಾಲೇಜಿಗೆ ಹೋಗಿ ಬರುತ್ತಿದ್ದರು.

ಸಂಜೆ ಸುಮಾರು ಐದು ಗಂಟೆಗೆ ವೇಳೆಗೆ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಹೇಮಂತ್ ನಿಯಂತ್ರಣ ತಪ್ಪಿ ನೀರು ಪಾಲಾಗಿದ್ದಾರೆ. ಈಜು ಗೊತ್ತಿಲ್ಲದ ಕಾರಣ ಇವರು ನೀರಿನ ಸೆಳೆತಕ್ಕೆ ಸಿಲುಕಿದರು. ಇತರ ವಿದ್ಯಾರ್ಥಿಗಳು ತಕ್ಷಣ ಪರಿಸರದ ನಿವಾಸಿಗಳಿಗೆ ವಿಷಯ ತಿಳಿಸಿದ್ದಾರೆ. ಮಾಹಿತಿ ತಿಳಿದ ಅಗ್ನಿಶಾಮಕ ದಳದ ಘಟಕ ಪುತ್ತೂರಿನಿಂದ ಸ್ಥಳಕ್ಕೆ ಧಾವಿಸಿ ಪತ್ತೆ ಕಾರ್ಯ ನಡೆಸುತ್ತಿದೆ. ಆದರೆ ರಾತ್ರಿಯ ತನಕ ಪತ್ತೆಯಾಗಿಲ್ಲ. ಪುತ್ತೂರು ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ಮಾರ್ಗದರ್ಶನದಂತೆ ಎಸ್‌ಐ ಓಮನಾ ಮತ್ತವರ ಸಿಬ್ಬಂದಿ ತೆರಳಿ ರಾತ್ರಿಯೂ ಶೋಧ ಕಾರ್ಯಾಚರಣೆ ಮುಂದುವರಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News