×
Ad

ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆ: ಮುಖ್ಯಮಂತ್ರಿ ಭರವಸೆ

Update: 2017-11-22 23:55 IST

ಉಡುಪಿ, ನ.22: ಕ್ರೈಸ್ತ ಅಭಿವೃದ್ಧಿ ಪರಿಷತ್ತನ್ನು ನಿಗಮವನ್ನಾಗಿ ಮಾರ್ಪಾಡು ಮಾಡುವಂತೆ ಆಗ್ರಹಿಸಿ ಕರ್ನಾಟಕ ಕ್ರೈಸ್ತರ ಹಕ್ಕುಗಳ ಸಂಘಟನೆಯು ಇಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಸಂಘಟನೆಯ ವತಿಯಿಂದ ಸುಮಾರು 1500ಕ್ಕೂ ಅಧಿಕ ಪಾಸ್ಟರ್‌ಗಳು ಮತ್ತು ಪ್ರಮುಖ ಮುಖಂಡರು ಕರ್ನಾಟಕ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಸಮಾವೇಶಗೊಂಡು ಈ ಮನವಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಈ ಬಗ್ಗೆ ಮುಂದಿನ ಬಜೆಟ್‌ನಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಮತ್ತು ಕ್ರೈಸ್ತ ಸಮುದಾಯಕ್ಕಾಗಿ ನೀಡಿದ ಅನು ದಾನವನ್ನು ಸದ್ಬಳಕೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.

ರಾಜ್ಯದಲ್ಲಿ ಕ್ರೈಸ್ತ ಸಮುದಾಯಕ್ಕೆ ರಾಜಕೀಯವಾಗಿ ಸಬಲಗೊಳಿಸಲು ಮುಂದಿನ 2018ನೆ ಸಾಲಿನ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಕನಿಷ್ಠ ಏಳು ಸ್ಥಾನಗಳನ್ನು ವಿಧಾನಸಭೆಯಲ್ಲಿ ಸ್ಪರ್ಧಿಸಲು ಅವಕಾಶವನ್ನು ನೀಡ ಬೇಕು ಎಂಬ ಮನವಿಗೆ ಪ್ರತ್ರಿಕ್ರಿಯಿಸಿದ ಮುಖ್ಯಮಂತ್ರಿ, ಮುಂದಿನ ದಿನಗಳಲ್ಲಿ ಪಕ್ಷದ ಉನ್ನತ ನಾಯಕರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ನಿಯೋಗದಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷ ಪಾಸ್ಟರ್ ರಾಜಶೇಖರ್, ಕಾರ್ಯದರ್ಶಿ ಪ್ರಶಾಂತ್ ಜತ್ತನ್ನ, ಪದಾಧಿಕಾರಿಗಳಾದ ಆನಂದ್, ಪೀಟರ್ ದಾಂತಿ, ಮರಿಯಪ್ಪ, ಏಸುದಾಸ್, ಜೋಸೆಫ್ ಜಮಖಂಡಿ, ಪಾಸ್ಟರ್ ಜಾನ್ಸನ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News