ರೊಹಿಂಗ್ಯನ್ನರ ವಿರುದ್ಧದ ದೌರ್ಜನ್ಯಗಳು ‘ಜನಾಂಗೀಯ ನಿರ್ಮೂಲನೆ’ಗೆ ಸಮ: ಅಮೆರಿಕ

Update: 2017-11-23 17:14 GMT

ವಾಶಿಂಗ್ಟನ್, ನ. 23: ಮ್ಯಾನ್ಮಾರ್‌ನ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳು ‘ಜನಾಂಗೀಯ ನಿರ್ಮೂಲನೆ’ಗೆ ಸಮವಾಗಿದೆ ಎಂದು ಅಮೆರಿಕ ಗುರುವಾರ ಹೇಳಿದೆ ಹಾಗೂ ಈ ಪರಿಸ್ಥಿತಿಗೆ ಕಾರಣರಾದವರನ್ನು ಗುರಿಯಾಗಿಸಿ ದಿಗ್ಬಂಧನಗಳನ್ನು ವಿಧಿಸುವುದಾಗಿ ಎಚ್ಚರಿಸಿದೆ.

‘‘ಲಭ್ಯವಿರುವ ವಾಸ್ತವಾಂಶಗಳ ಸೂಕ್ಷ್ಮ ಹಾಗೂ ಸಮಗ್ರ ವಿಶ್ಲೇಷಣೆಯ ಬಳಿಕ, ಉತ್ತರ ರಖೈನ್ ರಾಜ್ಯದಲ್ಲಿ ನೆಲೆಸಿರುವ ಪರಿಸ್ಥಿತಿಯು ರೊಹಿಂಗ್ಯಾರ ಜನಾಂಗೀಯ ನಿರ್ಮೂಲನೆಗೆ ಸಮವಾಗಿದೆ ಎನ್ನುವುದು ಸ್ಪಷ್ಟವಾಗಿದೆ’’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್ ಹೇಳಿಕೆಯೊಂದರಲ್ಲಿ ತಿಳಿಸಿದರು.

‘‘ಅಮೆರಿಕವು ತನ್ನ ಕಾನೂನಿನ ಮೂಲಕ ಇದಕ್ಕೆ ಉತ್ತರದಾಯಿತ್ವವನ್ನು ನಿಗದಿಪಡಿಸುತ್ತದೆ. ಈ ದೌರ್ಜನ್ಯಗಳಿಗೆ ಕಾರಣರಾದವರನ್ನು ಉತ್ತರದಾಯಿಗಳಾಗಿಸಬೇಕಾಗಿದೆ. ಅವರ ವಿರುದ್ಧ ದಿಗ್ಬಂಧನಗಳನ್ನು ವಿಧಿಸಲು ಅವಕಾಶವಿದೆ’’ ಎಂದು ಅವರು ಹೇಳಿದರು.

ಮ್ಯಾನ್ಮಾರ್ ವಿರುದ್ಧ ತಾನು ವಿಧಿಸಿದ್ದ ಹೆಚ್ಚಿನ ಆರ್ಥಿಕ ದಿಗ್ಬಂಧನಗಳನ್ನು ಅಮೆರಿಕ 2016ರಲ್ಲಿ ಹಿಂದಕ್ಕೆ ಪಡೆದುಕೊಂಡಿದ್ದರೂ, ಕೆಲವು, ಅದರಲ್ಲೂ ವಿಶೇಷವಾಗಿ ಸೇನೆಯ ವಿರುದ್ಧದ ದಿಗ್ಬಂಧನಗಳನ್ನು ಉಳಿಸಿಕೊಂಡಿದೆ.

ನೂತನ ದಿಗ್ಬಂಧನಗಳನ್ನು ಇತ್ತೀಚಿನ ದೌರ್ಜನ್ಯಗಳಿಗೆ ಕಾರಣರಾದ ವ್ಯಕ್ತಿಗಳು ಮತ್ತು ಗುಂಪುಗಳನ್ನು ಗುರಿಯಾಗಿಸಿ ವಿಧಿಸಲಾಗುವುದು ಎಂದು ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದರು.

ರೊಹಿಂಗ್ಯಾ ಮುಸ್ಲಿಮರ ಮೇಲೆ ಇತ್ತೀಚಿನ ತಿಂಗಳುಗಳಲ್ಲಿ ನಡೆದ ದಾಳಿಗಳು ‘ಸಂಘಟಿತ, ಯೋಜಿತ ಹಾಗೂ ವ್ಯವಸ್ಥಿತ’ ಎಂದು ಅವರು ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News