ಪತ್ನಿಯಿಂದ ಜಾಧವ್ ಭೇಟಿ: ಭಾರತದಿಂದ ಪಾಕ್‌ಗೆ 3 ಶರತ್ತು

Update: 2017-11-23 17:16 GMT

ಇಸ್ಲಾಮಾಬಾದ್, ನ. 23: ಪಾಕಿಸ್ತಾನದಲ್ಲಿ ಬಂಧನದಲ್ಲಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್‌ರನ್ನು ಭೇಟಿಯಾಗಲು ಅವರ ಪತ್ನಿಗೆ ಅವಕಾಶ ನೀಡುವ ಪಾಕಿಸ್ತಾನದ ಕೊಡುಗೆಯನ್ನು ಭಾರತ ಸ್ವೀಕರಿಸಿದೆ, ಆದರೆ, ಅದಕ್ಕೆ ಮೂರು ಶರತ್ತುಗಳನ್ನು ವಿಧಿಸಿದೆ.

 ಪಾಕಿಸ್ತಾನದಲ್ಲಿ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಜಾಧವ್‌ಗೆ ಪಾಕಿಸ್ತಾನದ ಸೇನಾ ನ್ಯಾಯಾಲಯವೊಂದು ಎಪ್ರಿಲ್‌ನಲ್ಲಿ ಗಲ್ಲು ಶಿಕ್ಷೆ ಘೋಷಿಸಿರುವುದನ್ನು ಸ್ಮರಿಸಬಹುದಾಗಿದೆ. ಆದರೆ, ಈ ಆರೋಪಗಳನ್ನು ತಳ್ಳಿಹಾಕಿರುವ ಭಾರತ, ಇರಾನ್‌ನಲ್ಲಿ ಉದ್ಯಮ ನಡೆಸುತ್ತಿರುವ ಜಾಧವ್‌ರನ್ನು ಪಾಕಿಸ್ತಾನ ಅಪಹರಿಸಿದೆ ಎಂದು ಹೇಳಿದೆ.

‘‘ಜಾಧವ್‌ರನ್ನು ಭೇಟಿಯಾಗಲು ತನ್ನ ಅತ್ತೆಯೊಂದಿಗೆ ಹೋಗಲು ಅವರ ಪತ್ನಿ ಬಯಸಿದ್ದಾರೆ ಎಂಬುದನ್ನು ನಾವು ಪಾಕಿಸ್ತಾನಕ್ಕೆ ತಿಳಿಸಿದ್ದೇವೆ’’ ಎಂದು ವಿದೇಶ ಸಚಿವಾಲಯ ಹೇಳಿದೆ. ಆದರೆ, ಅದಕ್ಕೆ ಮೂರು ಶರತ್ತುಗಳನ್ನು ವಿಧಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

‘‘ಇಬ್ಬರೂ ಮಹಿಳೆಯರ ಸುರಕ್ಷತೆಯ ಬಗ್ಗೆ ಪಾಕಿಸ್ತಾನ ಸರಕಾರದಿಂದ ಖಾತರಿಯನ್ನು ಭಾರತ ಬಯಸುತ್ತದೆ. ಪಾಕಿಸ್ತಾನದಲ್ಲಿನ ಅವರ ವಾಸ್ತವ್ಯದ ವೇಳೆ ಅವರನ್ನು ವಿಚಾರಣೆ ಮಾಡಬಾರದು ಹಾಗೂ ಅವರಿಗೆ ಕಿರುಕುಳ ನೀಡಬಾರದು’’ ಎಂದು ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದರು.

‘‘ಜಾಧವ್ ಭೇಟಿ ಸೇರಿದಂತೆ ಎಲ್ಲ ಸಮಯದಲ್ಲಿ ಪಾಕಿಸ್ತಾನದಲ್ಲಿರುವ ನಮ್ಮ ಹೈಕಮಿಶನ್‌ನ ರಾಜತಾಂತ್ರಿಕರೊಬ್ಬರು ಅವರ ಜೊತೆ ಇರಲು ಅವಕಾಶ ನೀಡಬೇಕು ಎಂದು ನಾವು ಕೋರಿದ್ದೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News