ಸಹ್ಯಾದ್ರಿಯಲ್ಲಿ 'ಎ.ಕೆ. ಕಾರ್ಪೊರೇಟ್ ಕ್ರಿಕೆಟ್ ಬ್ಯಾಶ್' ಗೆ ಚಾಲನೆ

Update: 2017-11-23 17:28 GMT

ಮಂಗಳೂರು,ನ.23:ಕಳೆದ ಎರಡು ವರ್ಷಗಳಲ್ಲಿ ಮಂಗಳೂರಿನಲ್ಲಿ ಮಂಗಳೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವನ್ನು ಅದ್ದೂರಿಯಾಗಿ ನೆರೆವೇರಿಸಿ, ಈ ವರ್ಷದ ಆರಂಭದಲ್ಲಿ ತುಳು ಚಿತ್ರರಂಗದ ಕೋಸ್ಟಲ್‍ವುಡ್ ಪ್ರೀಮಿಯರ್ ಲೀಗ್ ಪಂದ್ಯಾಟವನ್ನು ಯಶಸ್ವಿಯಾಗಿ ನಡೆಸಿದ ಮಂಗಳೂರಿನ ಬ್ರ್ಯಾಂಡ್ ವಿಷನ್ ಸಂಸ್ಥೆಯು ಸಹ್ಯಾದ್ರಿ ಸಂಸ್ಥೆಯ ಸಹಕಾರದೊಂದಿಗೆ ಕರಾವಳಿ ಕರ್ನಾಟಕ ಭಾಗದ ಪ್ರಪ್ರಥಮ ಎಕೆ ಕಾರ್ಪೋರೇಟ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.

ಎಕೆ ಸಮೂಹ ಸಂಸ್ಥೆಯು ಪಂದ್ಯಕೂಟದ ಟೈಟಲ್ ಸ್ಪೋನ್ಸರ್ ಸಂಸ್ಥೆಯಾಗಿರುತ್ತದೆ. ಎ ಕೆ ಸಮೂಹ ಸಂಸ್ಥೆಯ ನಿರ್ದೇಶಕ ನಿಸಾರ್ ಅಹ್ಮದ್, ಸಹ್ಯಾದ್ರಿ ಸಂಸ್ಥೆಯ ಶ್ರೀ ಮಂಜುನಾಥ ಭಂಡಾರಿಯವರು ಪಂದ್ಯಕೂಟ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.

ಸಹ್ಯಾದ್ರಿ ಕಾಲೇಜಿನ ಪಕ್ಕದಲ್ಲಿ ಹರಿಯುತ್ತಿರುವ ನೇತ್ರಾವತಿ ನದಿಯ ತಟದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಹುಲ್ಲುಹಾಸಿನ ಮೈದಾನ ಮತ್ತು ಹುಲ್ಲು ಹಾಸಿನ ಪಿಚ್‍ನಲ್ಲಿ ಈ ಪಂದ್ಯಕೂಟವು ನಡೆಯಲಿದೆ.   ಪಂದ್ಯಾಟವು ಪ್ರಥಮ ಎರಡು ದಿನಗಳಲ್ಲಿ ಹಗಲಿನಲ್ಲಿ ಮತ್ತು ಕೊನೆಯ ಎರಡು ದಿನಗಳಲ್ಲಿ ಹೊನಲು ಬೆಳಕಿನಡಿಯಲ್ಲಿ ಆಟವು ಜರಗಲಿರುವುದು. 

ವಿಜೇತ ಮತ್ತು ದ್ವಿತೀಯ ಸ್ಥಾನವನ್ನು ಗೆಲ್ಲುವ ತಂಡಗಳು ಆಕರ್ಷಕ ಟ್ರೋಫಿಯೊಂದಿಗೆ ಲಕ್ಷಾಂತರ ಮೊತ್ತದ ನಗದು ಬಹುಮಾನವನ್ನು ಪಡೆಯಲಿವೆಯಲ್ಲದೆ ಇತರ ಹಲವಾರು ವೈಯಕ್ತಿಕ ಬಹುಮಾನಗಳಿವೆ. 

ಪಂದ್ಯಾಟವು ಲೀಗ್ ಮತ್ತು ನಾಕೌಟ್ ಆಧಾರದಲ್ಲಿ ತಲಾ ಹತ್ತು ಓವರುಗಳ ಇನ್ನಿಂಗ್ಸ್ ಗಳನ್ನೊಳಗೊಂಡಿದೆ. ಪಂದ್ಯಾಟದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧ ಕಂಪನಿ, ಬ್ಯಾಂಕ್ ಮತ್ತು ವಿಶ್ವವಿದ್ಯಾಲಯಗಳ 24 ತಂಡಗಳು ಭಾಗವಹಿಸಲಿವೆ. ಎಂಸಿಎಫ್, ಮಣಿಪಾಲ ವಿಶ್ವವಿದ್ಯಾಲಯವನ್ನೊಳಗೊಂಡ ಟೀಂ ಮಣಿಪಾಲ, ಉದಯವಾಣಿ ಬಳಗವನ್ನೊಳಗೊಂಡ  ಮಣಿಪಾಲ ಟೆಕ್ನಾಲಜಿ ಲಿಮಿಟೆಡ್, ಕಾಪೋರೇಷನ್ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಎಂಇಝೆಡ್, ಫೋರಂ ಮಾಲ್, ಎಕೆ ಗ್ರೂಪ್, ದಿಯಾ ಸಿಸ್ಟಮ್ಸ್, ರೋಬೋಸಾಫ್ಟ್, ಕಾಡೋಲೈಟ್, ಸುಜ್ಲಾನ್, ಆರ್‍ಪಿಜಿ, ಯುಬಿ, ಎನ್ವೋಯಿ , ಮರಿಯನ್ ಪ್ರೊಜೆಕ್ಟ್ಸ್, ಕ್ಲಬ್ ಮಂತ್ರ, ವೆಸ್ಟರ್ನ್ ಬಿಲ್ಡರ್ಸ್, ಇನವೇಂಜರ್, ಎಸ್‍ಜಿಎಸ್‍ಎ, ಮೈಟ್ ಮೂಡಬಿದ್ರೆ, ಪ್ರಸನ್ನಾ ಟೆಕ್ನಾಲಜಿ, ಪರ್‍ಫೋಮ್ ಗ್ರೂಪ್, ಗಣೇಶ್ ಶಿಪ್ಪಿಂಗ್ ಕಂಪನಿಯ ತಂಡಗಳು ಭಾಗವಹಿವೆ. 

24 ತಂಡಗಳನ್ನು 8 ವಿಭಾಗಗಳನ್ನಾಗಿ ವಿಭಜಿಸಲಾಗಿದ್ದು ಲೀಗ್ ಹಂತದ ಪಂದ್ಯಗಳ ಬಳಿಕ ಪ್ರತಿಯೊಂದು ಗುಂಪಿನಿಂದ ಪ್ರಥಮ ಸ್ಥಾನವನ್ನು ಪಡೆಯುವ ಒಂದೊಂದು ತಂಡವು ನಾಕೌಟ್ ಹಂತವನ್ನು ಪ್ರವೇಶಿಸಲಿವೆ.  ವಿಜೇತ ತಂಡಗಳಿಗೆ ರಾಜ್ಯ ರಾಷ್ಟ್ರ ಮಟ್ಟದ ಕಾರ್ಪೋರೇಟ್ ಪಂದ್ಯಕೂಟಗಳಲ್ಲಿ ಭಾಗವಹಿಸುವ ಅವಕಾಶವು ಲಭ್ಯವಾಗಲಿದೆ.

ಹಾರ್ಡ್‍ಟೆನಿಸ್‍ಬಾಲ್‍ನ ಉಪಯೋಗದೊಂದಿಗೆ ಟರ್ಫ್ ಪಿಚ್‍ನಲ್ಲಿ  ಜರಗಲಿರುವ ಈ ಪಂದ್ಕಕೂಟವು ಆಟಗಾರರಿಗೆ ಹೊಸ ಅನುಭವವನ್ನು ತಂದುಕೊಡಲಿದೆ. ಈ ಪಂದ್ಯಕೂಟವು www.tenniscricket.in ನಲ್ಲಿ ನೇರಪ್ರಸಾರವನ್ನು ಮತ್ತು  www.famecrick.com ನಲ್ಲಿ ನೇರ ಸ್ಕೋರಿಂಗ್ ಬಿತ್ತರವಾಗಲಿದೆ.

ಪ್ರಥಮ ಪಂದ್ಯವು ನ23ರಂದು ಬೆಳಗ್ಗೆ ಗಂಟೆ 8.00ಕ್ಕೆ ಆರಂಭವಾಗಿದ್ದು ಪ್ರಥಮ ಪಂದ್ಯ ಮುಗಿದೊಡನೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಟ್ರೋಫಿ ಬಿಡುಗಡೆಯೂ ನೆರವೇರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News