×
Ad

ಪ್ರವಾದಿ ಶಿಷ್ಟಾಚಾರ ಅಳವಡಿಸಲು ಬೇಕಲ ಉಸ್ತಾದ್ ಕರೆ

Update: 2017-11-25 23:15 IST

ಮಂಗಳೂರು, ನ. 25: ರಬೀವುಲ್ ಅವ್ವಲ್ ಶ್ರೇಷ್ಠ ತಿಂಗಳಾಗಿದ್ದು, ಈ ತಿಂಗಳಲ್ಲಿ ಹೆಚ್ಚಾಗಿ ಪ್ರವಾದಿ ಮುಹಮ್ಮದ್ (ಸ) ಅವರ ಬಗ್ಗೆ ಗುಣಗಾಣಗಳು ನಡೆಯುತ್ತವೆ. ಮುಸ್ಲಿಂ ಸಮುದಾಯವು ಪ್ರವಾದಿ ಅವರ ದೈನಂದಿನ ಶಿಷ್ಟಾಚಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಂಇಯ್ಯತುಲ್ ಉಲಮಾದ ರಾಜ್ಯಾಧ್ಯಕ್ಷ ಹಾಗೂ ಉಡುಪಿ ಜಿಲ್ಲಾ ಖಾಝಿ ಬೇಕಲ ಇಬ್ರಾಹೀಂ ಮುಸ್ಲಿಯಾರ್ ಕರೆ ನೀಡಿದ್ದಾರೆ.

ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ನಗರದ ನೆಹರೂ ಮೈದಾನದ ಫುಟ್‌ಬಾಲ್ ಗ್ರೌಂಡ್‌ನಲ್ಲಿ ಶನಿವಾರ ಜರಗಿದ ಹುಬ್ಬುರ್ರಸೂಲ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಬೀವುಲ್ ಅವ್ವಲ್ ಪುಣ್ಯದಾಯಕ ತಿಂಗಳು. ಈ ತಿಂಗಳಿಗೆ ಹೆಚ್ಚಿನ ಮಹತ್ವ ಇರುವುದರಿಂದ ವಿವಿಧ ಮಸೀದಿಗಳು, ಮನೆಗಳಲ್ಲಿ ಮೌಲೂದ್ ಪಾರಾಯಣ ನಡೆಯುತ್ತದೆ. ಮಾನವನ ಪಾಲಿಗೆ ಸಂತುಷ್ಟದ ತಿಂಗಳಾಗಿದೆ ಎಂದು ಹೇಳಿದರು.

ಮಾಣಿ ದಾರುಲ್ ಇರ್ಷಾದ್‌ನ ಮುಖ್ಯಸ್ಥ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾತನಾಡಿ, ಪವಿತ್ರ ಗ್ರಂಥ ಕುರ್‌ಆನ್‌ನಲ್ಲಿ ಅಲ್ಲಾಹನು ಆದೇಶಗಳನ್ನು ಪ್ರವಾದಿ ಮುಹಮ್ಮದ್ (ಸ) ಅವರು ಚಾಚೂ ತಪ್ಪದೆ ಪಾಲಿಸಿದ್ದಾರೆ. ಮಾತ್ರವಲ್ಲದೆ ತನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರವಾದಿ ಮುಹಮ್ಮದ್ (ಸ) ಅವರ ಆದರ್ಶ, ಬದುಕು ನಮಗೆ ಮಾರ್ಗದರ್ಶನವಾಗಬೇಕು ಎಂದರು.

ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿಯ ಅಧ್ಯಕ್ಷ ಕೆ.ಪಿ.ಸಿರಾಜುದ್ದೀನ್ ಸಅದಿ ಕನ್ಯಾನ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಯೀಲ್ ಸಖಾಫಿ, ಎಸ್ಸೆಸ್ಸೆಫ್ ಕೇರಳ ರಾಜ್ಯಾಧ್ಯಕ್ಷ ಡಾ.ಫಾರೂಕ್ ನಯೀಮಿ ಕೊಲ್ಲಂ, ಎಸ್‌ವೈಎಸ್ ರಾಜ್ಯಾಧ್ಯಕ್ಷ ಜಿ.ಎಂ.ಕಾಮಿಲ್ ಸಖಾಫಿ, ಎಸ್.ಎಂ. ರಶೀದ್ ಹಾಜಿ, ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಡ್ವಕೇಟ್ ಇಲ್ಯಾಸ್ ನಾವುಂದ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News