ಸೌದಿಯಲ್ಲಿ ಸಂಕಷ್ಟದಲ್ಲಿದ್ದ ಮಂಗಳೂರಿನ ವಿಜಯಾ ಕೊನೆಗೂ ತವರಿಗೆ

Update: 2017-11-26 14:09 GMT

ಮಂಗಳೂರು, ನ. 26: ಮನೆ ಕೆಲಸದ ಉದ್ಯೋಗಕ್ಕೆಂದು ಸೌದಿ ಅರೇಬಿಯಕ್ಕೆ ತೆರಳಿ ಸಂಕಷ್ಟಕ್ಕೀಡಾಗಿದ್ದ ಮಂಗಳೂರು ವಾಮಂಜೂರಿನ ಮಹಿಳೆ ವಿಜಯಾ (44) ರವಿವಾರ ಮಂಗಳೂರು ವಿಮಾನ ನಿಲ್ದಾಣದ ಮೂಲಕ ತವರಿಗೆ ತಲುಪಿದ್ದಾರೆ.

ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆಸರೆಯಾಬೇಕೆಂಬ ಹಂಬಲದೊಂದಿಗೆ ವಿಜಯಾ ಅವರು 2015ರಲ್ಲಿ ಮನೆ ಕೆಲಸದ ಉದ್ಯೋಗಕ್ಕೆಂದು ಸೌದಿ ಅರೇಬಿಯಾದ ದಮಾಮ್ ಗೆ ತೆರಳಿದ್ದರು. ಮೊದಲ ಮೂರು ತಿಂಗಳ ಕಾಲ ಮಾತ್ರ ಮನೆಯವರೊಂದಿಗೆ ಸಂಪರ್ಕದಲ್ಲಿದ್ದು ಅನಂತರದ ದಿನಗಳಲ್ಲಿ ವಿಜಯಾ ಅವರು ಸರಿಯಾಗಿ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ ಎಂದು ವಿಜಯಾ ಅವರ ಪತಿ ಬಾಲಪ್ಪ ಬಾಲಕೃಷ್ಣ ತಿಳಿಸಿದ್ದರು.

ವಿಜಯಾ ಅವರು ಸಂಪರ್ಕಕ್ಕೆ ಸಗದಿರುವುದರಿಂದ ಅನಾರೋಗ್ಯ ಪೀಡಿತ ಪತಿ ಬಾಲಪ್ಪ ಬಾಲಕೃಷ್ಣ ಮತ್ತು ಪುತ್ರ ಜಗಜೀವನ್ ಸಾಕಷ್ಟು ಸಂಕಟ ಮತ್ತು ಆತಂಕಕ್ಕೊಳಗಾಗಿದ್ದರು. ಈ ಬಗ್ಗೆ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಅವರು ಇಂಡಿಯನ್ ಸೋಶಿಯಲ್ ಫೋರಮ್ನ ಗಮನಕ್ಕೂ ತಂದಿದ್ದರು. ಹೀಗಾಗಿ ಪ್ರಕರಣವು ಭಾರತೀಯ ರಾಯಭಾರ ಕಚೇರಿಯಲ್ಲಿ ದಾಖಲಾಗಿ ಅವರ ಬಿಡುಗಡೆಗಾಗಿ ರಾಯಭಾರ ಕಚೇರಿಯ ಸಹಯೋಗದೊಂದಿಗೆ ಇಂಡಿಯನ್ ಸೋಶಿಯಲ್ ಫೋರಮ್ ಕಾರ್ಯಾಚರಿಸಿತ್ತು.

ಮಂಗಳೂರಿಗೆ ಬಂದಿಳಿದ ವಿಜಯಾರನ್ನು ಎಸ್‌ಡಿಪಿಐ ನಿಯೋಗವು ಸ್ವಾಗತಿಸಿತು. ನಿಯೋಗದಲ್ಲಿ ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಥಾವುಲ್ಲಾ ಜೋಕಟ್ಟೆ, ಇಸ್ಮಾಯಿಲ್ ಎಂಜಿನಿಯರ್, ನೂರುಲ್ಲಾ ಕುಳಾಯಿ, ನಾಸಿರ್ ಉಳಾಯಿಬೆಟ್ಟು, ವುಮನ್ಸ್ ಇಂಡಿಯಾ ಮೂವ್‌ಮೆಂಟ್ ರಾಜ್ಯ ಕಾರ್ಯದರ್ಶಿ ಆಯಿಶಾ ಬಜ್ಪೆ, ಪಾಪ್ಯುಲರ್ ಫ್ರಂಟ್‌ನ ಬಜ್ಪೆ ವಲಯಾಧ್ಯಕ್ಷ ಎ.ಕೆ.ಅಶ್ರಫ್ ಉಪಸ್ಥಿತರಿದ್ದರು.

ಐಎಸ್‌ಎಫ್ ಅಭಿನಂದನೆ

ವಿಜಯಾ ಪ್ರಕರಣ ಶೀಘ್ರ ಇತ್ಯರ್ಥವಾಗಲು ಸಹಕರಿಸಿದ ಎಸ್‌ಡಿಪಿಐ ಮುಖಂಡರಿಗೂ ಮತ್ತು ಮಾಧ್ಯಮ ಪ್ರತಿನಿಧಿಗಳಿಗೂ ಇಂಡಿಯನ್ ಸೋಶಿಯಲ್ ಫೋರಮ್ ಅಭಿನಂದನೆ ಸಲ್ಲಿಸುತ್ತದೆ ಎಂದು ಪ್ರಕಟನೆ ತಿಳಿಸಿದೆ.

ಐಎಸ್‌ಎಫ್ ನೆರವಿನಿಂದ ಊರಿಗೆ ಮರಳಿದ್ದೇನೆ: ವಿಜಯಾ

 ಸುಮಾರು ಎರಡೂವರೆ ವರ್ಷಗಳಿಂದ ಸೌದಿಯಲ್ಲಿ ಸಂಕಷ್ಟದಲ್ಲಿದ್ದ ನನಗೆ ಐಎಸ್‌ಎಫ್ (ಇಂಡಿಯನ್‌ ಸೋಶಿಯನ್ ಪೋರಂ)ನವರು ತುಂಬಾ ಸಹಾಯ ಮಾಡಿದ್ದಾರೆ. ಅವರ ನೆರವಿನಿಂದ ನಾನು ಊರಿಗೆ ಮರಳುವಂತಾಗಿದೆ ಎಂದು ಸೌದಿಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಜಯಾ ಹೇಳಿದ್ದಾರೆ.

ನಾನು ಊರಿಗೆ ಮರಳಿರುವುದರಿಂದ ತುಂಬಾ ಸಂತೋಷವಾಗುತ್ತಿದೆ. ಊರಿಗೆ ಮರಳಿಸುವಲ್ಲಿ ನನ್ನನ್ನು ಸೌದಿಯಲ್ಲಿ ಸಹಾಯ ಮಾಡಿ ಐಎಸ್‌ಎಫ್‌ನವರಿಗೆ ತುಂಬಾ ಧನ್ಯವಾದಗಳು. ಮುಂದೆ ಯಾರಾದರೂ ಸಂಕಷ್ಟದಲ್ಲಿ ಸಿಲುಕಿದ್ದರೆ ಅವರಿಗೂ ಸೂಕ್ತ ರೀತಿಯಲ್ಲಿ ಸಹಾಯ ದೊರೆಯಲಿ ಎಂಬ ಹಾರೈಕೆ ನನ್ನದು ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News