ದಲಿತರಿಗೂ ಶಾದಿ ಭಾಗ್ಯ ಸಿಗಲಿ: ಪೇಜಾವರ ಸ್ವಾಮೀಜಿ
ಉಡುಪಿ, ನ.26: ಅಲ್ಪಸಂಖ್ಯಾತರಿಗೆ ನೀಡುವ ಸರಕಾರಿ ಸೌಲಭ್ಯಗಳನ್ನು ದಲಿತ, ಹಿಂದೂಳಿದ ವರ್ಗದವರಿಗೂ ನೀಡಬೇಕು. ಅಲ್ಪಸಂಖ್ಯಾತರಿಗೆ ಜಾರಿಗೆ ತಂದಿರುವ ಶಾದಿ ಭಾಗ್ಯ ಯೋಜನೆ ದಲಿತರಿಗೂ ಸಿಗುವಂತಾಗಲಿ ಎಂದು ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಉಡುಪಿ ಕಲ್ಸಂಕ ರೋಯಲ್ ಗಾರ್ಡನ್‌ನಲ್ಲಿ ನಡೆಯುತ್ತಿರುವ ಧರ್ಮ ಸಂಸದ್‌ನ ಮೂರನೆ ದಿನವಾದ ಇಂದು ಧರ್ಮಸಂಸದ್ ನಿರ್ಣಯಗಳು ಕುರಿತ ಗೋಷ್ಠಿಯಲ್ಲಿ ಅವರು ಆಶೀರ್ವಚನ ನೀಡಿದರು. ಈ ದೇಶದಲ್ಲಿ ಅಲ್ಪ ಸಂಖ್ಯಾತರು ಹಾಗೂ ಬಹುಸಂಖ್ಯಾತರು ಎಂಬುದಾಗಿ ತಾರತಮ್ಯ ಮಾಡದೆ ಎಲ್ಲರಿಗೂ ಸಮಾನ ಅವಕಾಶ ನೀಡಬೇಕು ಎಂದು ಅವರು ತಿಳಿಸಿದರು.
ನನ್ನನ್ನು ದಲಿತ, ಹಿಂದುಳಿದ ವರ್ಗದ ವಿರೋಧಿ ಎಂಬುದಾಗಿ ಗದ್ದಲ ಮಾಡಲಾಗುತ್ತಿದೆ. ಅವರಿಗೆ ನನ್ನ ವಿಚಾರ ಸರಿಯಾಗಿ ಅರ್ಥ ಆಗಿಲ್ಲ. ಧರ್ಮದ ಆಧಾರದ ವಿಭಜನೆ ಸರಿಯಲ್ಲ. ನಾನು ಅದನ್ನು ವಿರೋಧ ಮಾಡುತ್ತೇನೆ. ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ನೀಡುವ ಸೌಲಭ್ಯಗಳು ಬಹುಸಂಖ್ಯಾತರ ಸಂಸ್ಥೆಗಳಿಗೂ ಸಿಗಬೇಕು. ಬಹುಸಂಖ್ಯಾತರಿಗೆ ಸೌಲಭ್ಯ ನೀಡುವುದರಿಂದ ದಲಿತರಿಗೆ ಅನ್ಯಾಯ ಆಗಲ್ಲ. ಇದರಿಂದ ಯಾವುದೇ ಸಮಾಜಕ್ಕೂ ನಷ್ಟ ಆಗಲ್ಲ ಎಂದರು.
ನಾನು ಅಂಬೇಡ್ಕರ್‌ಗೆ ಅವಮಾನ ಮಾಡಿಲ್ಲ. ಸಂವಿಧಾನಕ್ಕೆ ಎಂದೂ ಅಪಚಾರ ಮಾಡಿಲ್ಲ. ಸಂವಿಧಾನ ಬದಲಾವಣೆ ಮಾಡುವ ವಿಚಾರವನ್ನು ನಾನು ಹೇಳಿಲ್ಲ. ಅಪಾರ್ಥ ಮಾಡಬೇಡಿ. ಸಂವಿಧಾನದ ಮೇಲೆ ನನಗೆ ಗೌರವವಿದೆ ಎಂದು ಪೇಜಾವರ ಶ್ರೀ ತಿಳಿಸಿದರು.