ಕೃಷ್ಣಾಪುರ: ಅಪಹರಣಗೊಂಡ ಸಫ್ವಾನ್ ಹತ್ಯೆ ಶಂಕೆ ?
ಮಂಗಳೂರು, ನ. 26: ಸುರತ್ಕಲ್ ಠಾಣೆ ವ್ಯಾಪ್ತಿಯ ಕೃಷ್ಣಾಪುರದಲ್ಲಿ ರೌಡಿ ತಂಡವೊಂದರಿಂದ ಅಪಹರಣಕ್ಕೊಳಗಾದ ಸ್ಥಳೀಯ ಯುವಕ ಸಫ್ವಾನ್ ಹತ್ಯೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಇದೆ.
ಅ. 5ರಂದು ಹಾಡಹಗಲೇ ಸಫ್ವಾನ್‌ನನ್ನು ಅಪಹರಿಸಲಾಗಿತ್ತು. ಬಳಿಕ ಸಫ್ವಾನ್‌ನ ಪತ್ತೆಯಾಗಲಿಲ್ಲ. ಈ ಬಗ್ಗೆ ಡಿವೈಎಫ್‌ಐ ನಾನಾ ರೀತಿಯ ಪ್ರತಿಭಟನೆ ನಡೆಸಿತ್ತು. ಆದರೂ ಪ್ರಯೋಜನವಾಗಲಿಲ್ಲ. ಈ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಫೈಝಲ್ ಮತ್ತು ಸಾಹಿಲ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಈ ಆರೋಪಿಗಳ ಹೇಳಿಕೆಯ ಪ್ರಕಾರ ಅಪಹರಿಸಿದ ದಿನವೇ ಸಫ್ವಾನ್‌ನನ್ನು ಕೊಲೆಗೈದು ಆಗುಂಬೆ ಘಾಟಿಯಲ್ಲಿ ಎಸೆಯಲಾಗಿದೆ ಎಂದು ಮೂಲವೊಂದು ತಿಳಿಸಿವೆ. ಹಾಗಾಗಿ ಇದೀಗ ಮೃತದೇಹದ ಕಳೇಬರಕ್ಕಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ ಎನ್ನಲಾಗಿದೆ.
ಇನ್ನು ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಸಫ್ವಾನ್, ಸುಫಿಯಾನ್, ಸಂಶು ಎಂಬವರ ಬಂಧನವಾಗಲು ಬಾಕಿಯಿದ್ದು, ಅವರು ಸೆರೆಯಾದರೆ ಪ್ರಕರಣದ ನಿಜಾಂಶ ಬೆಳಕಿಗೆ ಬರಲಿದೆ.
ಮೃತದೇಹ ಪತ್ತೆಯಾಗಿಲ್ಲ: ಡಿಸಿಪಿ
ಸಫ್ವಾನ್‌ರ ಮೃತದೇಹ ಪತ್ತೆಯಾಗಿಲ್ಲ ಎಂದು ಡಿಸಿಪಿ ಹನುಮಂತರಾಯ ಸ್ಪಷ್ಟಪಡಿಸಿದ್ದಾರೆ. ಆಗುಂಬೆ ಘಾಟಿಯಲ್ಲಿ ಪತ್ತೆಯಾಗಿದೆ ಎನ್ನಲಾದ ಅವಶೇಷಗಳಿಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು ಅದು ಇನ್ನೂ ದೃಢಪಟ್ಟಿಲ್ಲ ಎಂದು ತಿಳಿಸಿದ್ದಾರೆ.