26/11 ಮುಂಬೈ ದಾಳಿಗೆ 9 ವರ್ಷ: ಇನ್ನೂ ನ್ಯಾಯಕ್ಕಾಗಿ ಕಾಯುತ್ತಿರುವ ಸಂತ್ರಸ್ತರು

Update: 2017-11-26 12:23 GMT

ಮುಂಬೈ, ನ.26: ದೇಶದ ವಾಣಿಜ್ಯ ನಗರಿ ಮುಂಬೈ ಮೇಲೆ ನವೆಂಬರ್ 26ರಂದು ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 166 ಜನರು ಸಾವನ್ನಪ್ಪಿದ್ದರು. ಈ ದಾಳಿ ನಡೆದು ಒಂಬತ್ತು ವರ್ಷಗಳು ಕಳೆದಿವೆ ಆದರೆ ಅದರ ಸಂತ್ರಸ್ತರು ಇನ್ನೂ ನ್ಯಾಯಕ್ಕಾಗಿ ಕಾಯುತ್ತಿದ್ದಾರೆ.

ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸೇರಿದ ಹತ್ತು ಮಂದಿ ಪಾಕಿಸ್ತಾನಿ ಉಗ್ರರು 2008ರ ನವೆಂಬರ್ 26ರಂದು ಮುಂಬೈ ಮೇಲೆ ದಾಳಿ ನಡೆಸಿದ್ದರು.

“ಇಡೀ ಘಟನೆ ಆಘಾತಕಾರಿಯಾಗಿತ್ತು ಮತ್ತು ಆ ಆಘಾತದಿಂದ ನಾನಿನ್ನೂ ಹೊರಬಂದಿಲ್ಲ. ಇಡೀ ಘಟನೆ ಈಗಲೂ ನನ್ನ ಕಣ್ಣ ಮುಂದೆ ಹಾದು ಹೋಗುತ್ತದೆ. ಆ ಘಟನೆಯ ಪ್ರತಿಯೊಂದು ಕ್ಷಣವನ್ನೂ ನಾನು ವಿವರಿಸಬಲ್ಲೆ” ಎಂದು ಹೇಳುತ್ತಾರೆ 26/11ರ ಸಂತ್ರಸ್ತೆ ಮತ್ತು ಪ್ರತ್ಯಕ್ಷದರ್ಶಿ ದೇವಿಕಾ.

ಈ ದುರ್ಘಟನೆಯಲ್ಲಿ ದೇವಿಕಾ ಕಾಲಿಗೆ ಗುಂಡು ತಗುಲಿತ್ತು ಮತ್ತು ಬಂಧಿಸಲ್ಪಟ್ಟ ಏಕೈಕ ಉಗ್ರ ಅಜ್ಮಲ್ ಕಸಬ್‌ನನ್ನು ಗುರುತಿಸಿದ ಪ್ರತ್ಯಕ್ಷದರ್ಶಿಗಳಲ್ಲಿ ಒಬ್ಬರಾಗಿದ್ದರು.

ಸತತ ಎರಡು ತಿಂಗಳ ಕಾಲ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡಿದರೂ ಕಸಬ್ ವಿರುದ್ಧ ಸಾಕ್ಷಿ ಹೇಳಲು ಮುಂದಾದ ದೇವಿಕಾರ ಧೈರ್ಯಕ್ಕೆ ಎಲ್ಲೆಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಈ ದಾಳಿಯ ಮಾಸ್ಟರ್ ಮೈಂಡ್ ಆಗಿರುವ ಹಫೀಝ್ ಸಯೀದ್ ಪಾಕಿಸ್ತಾನದಲ್ಲಿ ಸ್ವತಂತ್ರವಾಗಿ ತಿರುಗುತ್ತಿರುವ ಕಾರಣ ಘಟನೆಯಲ್ಲಿ ಮೃತಪಟ್ಟ ಕುಟುಂಬಗಳಿಗೆ ಇನ್ನೂ ನ್ಯಾಯ ದೊರಕಿಲ್ಲ ಎಂದು ಆಕೆ ಹೇಳುತ್ತಾರೆ.

“ಕಸಬ್‌ನನ್ನು ನ್ಯಾಯಾಲಯದಲ್ಲಿ ನೋಡಿದಾಗ ನನಗೆ ಕೋಪ ಉಕ್ಕೇರಿತ್ತು. ನನ್ನ ಕೈಯ್ಯಲ್ಲಿ ಗನ್ ಇರುತ್ತಿದ್ದರೆ ನಾನು ಆತನನ್ನು ಗುಂಡಿಕ್ಕಿ ಸಾಯಿಸುತ್ತಿದ್ದೆ. ಆದರೂ ಕಸಬ್ ಒಬ್ಬ ಸಣ್ಣ ಹುಳವಷ್ಟೇ. ಮುಂದೊಂದು ದಿನ ದೊಡ್ಡದೊಡ್ಡ ಭಯೋತ್ಪಾದಕರನ್ನು ಮತ್ತು ಮಾಸ್ಟರ್‌ಮೈಂಡ್‌ಗಳನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಲಾಗುವುದು” ಎಂಬ ಭರವಸೆ ಹೊಂದಿದ್ದೇನೆ ಎಂದು ಹೇಳುತ್ತಾರೆ ದೇವಿಕಾ.

 ಆದರೆ 2008ರ ನಂತರ ನನ್ನ ಜೀವನ ಮೊದಲಿನಂತಿರಲಿಲ್ಲ ಎಂದು ಹೇಳುವ ಆಕೆ ಕಸಬ್ ವಿರುದ್ಧ ಸಾಕ್ಷಿ ನುಡಿದ ಕಾರಣಕ್ಕಾಗಿ ಉಗ್ರರು ನನ್ನ ಹಿಂದೆ ಬೀಳುತ್ತಾರೆ ಮತ್ತು ಅದರಿಂದ ತೊಂದರೆಯಾಗಬಹುದು ಎಂಬ ಕಾರಣದಿಂದ ಬಹಳಷ್ಟು ಜನರು ನನ್ನನ್ನು ದೂರ ಮಾಡಿದ್ದರು ಎಂದಾಕೆ ತಿಳಿಸುತ್ತಾರೆ.

ಘಟನೆಯ ಇನ್ನೊರ್ವ ಸಾಕ್ಷಿಯಾಗಿರುವ ದೇವಿಕಾರ ತಂದೆ ಕೂಡಾ ಇದೇ ಮಾತನ್ನು ಪುನರುಚ್ಛರಿಸುತ್ತಾರೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಗ್ರಹಿಸುವ ಮೂಲಕ ಮುಂಬೈ ದಾಳಿಯಲ್ಲಿ ಮೃತಪಟ್ಟವರಿಗೆ ನ್ಯಾಯ ಒದಗಿಸಿಕೊಡಿ ಎಂದು ಸರಕಾರಕ್ಕೆ ಮನವಿ ಮಾಡುತ್ತಾರೆ. ನನ್ನ ಮಗಳ ಕಾಲಿಗೆ ಗುಂಡು ಬೀಳುವಾಗ ಆಕೆಗಿನ್ನೂ ಒಂಬತ್ತು ವರ್ಷ. ಆ ಘಟನೆ ನಿಜವಾಗಿಯೂ ಆಘಾತಕಾರಿಯಾಗಿತ್ತು. ಕಸಬ್‌ನನ್ನು ಗಲ್ಲಿಗೇರಿಸಿರುವುದ ಬಗ್ಗೆ ನಮಗೆ ಖುಷಿಯಿದೆ ಆದರೆ ಪಾಕಿಸ್ತಾನದಲ್ಲಿ ಕುಳಿತಿರುವ ಮಾಸ್ಟರ್‌ಮೈಂಡ್‌ಗಳನ್ನು ಶಿಕ್ಷಿಸುವ ತನಕ ನಮಗೆ ತೃಪ್ತಿಯಿಲ್ಲ ಎಂದವರು ಹೇಳುತ್ತಾರೆ.

ಘಟನೆಯ ಸಾಕ್ಷಿಯಾಗಿರುವ ಮತ್ತೊರ್ವ ವ್ಯಕ್ತಿ ಛತ್ರಪತಿ ಶಿವಾಜಿ ಟರ್ಮಿನಸ್‌ನಲ್ಲಿ ಟೀ ಮಾರುವ ಮುಹಮ್ಮದ್ ತೌಫಿಕ್, ಈ ಘಟನೆ ನನ್ನ ಮೇಲೆ ಅಳಿಸಲಾಗದ ಪರಿಣಾಮ ಬೀರಿದೆ ಎಂದು ಹೇಳುತ್ತಾರೆ. ಆ ಘಟನೆಯ ಬಗ್ಗೆ ಯೋಚಿಸಿದಾಗಲೆಲ್ಲಾ ನಾನು ಭಾವುಕನನಾಗುತ್ತೇನೆ. ನಾನು ಹಲವಾರು ಗಾಯಾಳುಗಳನ್ನು ರಕ್ಷಿಸಿದ್ದೇನೆ. ಆ ಸ್ಥಿತಿ ಅತ್ಯಂತ ಭೀಕರವಾಗಿತ್ತು. ಅದು ನಡೆದು ಒಂಬತ್ತು ವರ್ಷಗಳೇ ಕಳೆದರೂ ಪಾಕಿಸ್ತಾನದಲ್ಲಿರುವ ಮಾಸ್ಟರ್‌ಮೈಂಡ್‌ಗಳ ಬಂಧನವಾಗುವ ದಿನಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ತಿಳಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News