×
Ad

ರಾಷ್ಟ್ರವಾದಿ ಶಕ್ತಿಗಳನ್ನು ತಡೆಯಲು ಕರೆ: ಕ್ರೈಸ್ತ ಧರ್ಮಗುರುವಿಗೆ ಚುನಾವಣಾ ಆಯೋಗ ನೋಟಿಸ್

Update: 2017-11-26 19:12 IST

ಗಾಂಧಿನಗರ, ನ.26: ದೇಶದ ಅಲ್ಪಸಂಖ್ಯಾತರು ಅಭದ್ರತೆಯನ್ನು ಎದುರಿಸುತ್ತಿದ್ದಾರೆ ಹಾಗಾಗಿ ರಾಷ್ಟ್ರವಾದಿ ಶಕ್ತಿಗಳಿಗೆ ಮತ ಹಾಕಬೇಡಿ ಎಂದು ಗುಜರಾತ್‌ನ ಗಾಂಧಿನಗರದ ಕ್ರೈಸ್ತ ಧರ್ಮಗುರು ಥಾಮಸ್ ಮಕ್ವಾನ್ ಬರೆದ ಪತ್ರವು ಬಹಿರಂಗವಾದ ಬೆನ್ನಿಗೇ ಈ ಬಗ್ಗೆ ಸ್ಪಷ್ಟೀಕರಣ ಕೋರಿ ಚುನಾವಣಾ ಆಯೋಗವು ಆರ್ಕ್‌ಬಿಷಪ್‌ಗೆ ನೋಟಿಸ್ ಜಾರಿ ಮಾಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ವರದಿಯ ಪ್ರಕಾರ ಗಾಂಧಿನಗರದ ಜಿಲ್ಲಾ ಚುನಾವಣಾ ಅಧಿಕಾರಿಯವರ ಮೂಲಕ ಹಸ್ತಾಂತರಿಸಲ್ಪಟ್ಟಿರುವ ಈ ನೋಟಿಸ್ ನಲ್ಲಿ ಧರ್ಮಗುರುಗಳ ಈ ಪತ್ರವನ್ನು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯೆಂದು ಯಾಕೆ ಪರಿಗಣಿಸಬಾರದು ಎಂಬುದಕ್ಕೆ ಸ್ಪಷ್ಟೀಕರಣ ನೀಡುವಂತೆ ಕೋರಲಾಗಿದೆ.

ಕಾನೂನಾತ್ಮಕ ಹಕ್ಕುಗಳ ವೀಕ್ಷಣಾಲಯ (ಲೀಗಲ್ ರೈಟ್ಸ್ ಒಬ್ಸರ್ವೇಟರಿ) ನೀಡಿದ ದೂರಿನಂತೆ ಚುನಾವಣಾ ಆಯೋಗವು ಈ ನೋಟಿಸ್ ಜಾರಿ ಮಾಡಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.

ಥಾಮಸ್ ಅವರ ಪತ್ರವು ಜನರನ್ನು ಜಾತಿ ಮತ್ತು ಪಂಗಡದ ಆಧಾರದಲ್ಲಿ ವಿಭಜಿಸುವ ಮತ್ತು ಮತದಾರರಲ್ಲಿ ಭಯವನ್ನು ಹುಟ್ಟಿಸುವ ಪ್ರಯತ್ನವಾಗಿದೆ ಎಂದು ಆರೋಪಿಸಿರುವ ದೂರುದಾರರು ಧರ್ಮಗುರು ವಿರುದ್ಧ ಶೀಘ್ರ ಕ್ರಮಕೈಗೊಳ್ಳುವಂತೆ ಕೋರಿರುವುದಾಗಿ ವರದಿಗಳು ತಿಳಿಸಿವೆ.

ಈ ಹಿಂದೆ ಕಮ್ಯುನಿಸ್ಟ್ ಸರಕಾರಗಳು ಮತ್ತು ಸರ್ವಾಧಿಕಾರಿಗಳನ್ನು ಪದಚ್ಯುತಿಗೊಳಿಸಿದ ಉದಾಹರಣೆಗಳನ್ನು ನೀಡಿರುವ ಧರ್ಮಗುರು ಚುನಾವಣೆಯ ಸಮಯದಲ್ಲಿ ಒಟ್ಟಾಗಿ ಪ್ರಾರ್ಥಿಸುವಂತೆ ಕ್ರೈಸ್ತ ಸಮುದಾಯಕ್ಕೆ ಕರೆ ನೀಡಿದ್ದರು.

ಈ ಪತ್ರದ ಹಿಂದೆ ಯಾವುದೇ ದುರುದ್ದೇಶವಿಲ್ಲ ಎಂದು ತಿಳಿಸಿರುವ ಧರ್ಮಗುರು ಥಾಮಸ್ ಮಕ್ವಾನ್,್ ಉತ್ತಮ ವ್ಯಕ್ತಿಗಳು ಆಯ್ಕೆಯಾಗಲೆಂದು ನಾವು ಯಾವಾಗ ಬೇಕಾದರೂ ಪ್ರಾರ್ಥಿಸಬಹುದು. ಅಷ್ಟಕ್ಕೂ ಗುಜರಾತ್‌ನಲ್ಲಿ ಕ್ರೈಸ್ತರ ಜನಸಂಖ್ಯೆಯ ಇರುವುದೆಷ್ಟು ಕೇವಲ 0.5%. ಈ ಪತ್ರವನ್ನು ಯಾವುದೇ ಕೆಟ್ಟ ಉದ್ದೇಶದಿಂದ ಬರೆದಿಲ್ಲ. ಯಾರಾದರೂ ಈ ಪತ್ರವನ್ನು ಸಮಾಜವನ್ನು ಒಡೆಯಲು ಮತ್ತು ಮತದಾರರನ್ನು ಧ್ರುವೀಕರಿಸಲು ಬಳಸಿದರೆ ಅದು ದುರದೃಷ್ಟಕರ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News