ಭಯೋತ್ಪಾದನೆ ತಡೆಯಲು ಮಾನವೀಯ ಶಕ್ತಿಗಳು ಒಗ್ಗಟ್ಟಾಗಬೇಕು
ಹೊಸದಿಲ್ಲಿ, ನ.26: ಭಯೋತ್ಪಾದನೆಯ ಉಪಟಳವನ್ನು ನಿಲ್ಲಿಸಲು ಮಾನವೀಯ ಶಕ್ತಿಗಳು ಒಗ್ಗಟ್ಟಾಗಿ ಹೋರಾಟ ನಡೆಸಬೇಕು ಎಂದು ರವಿವಾರದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದರು.
38ನೆ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಉಗ್ರವಾದ ಜಗತ್ತಿನಾದ್ಯಂತ ಮಾನವತೆಗೆ ಅಪಾಯ ಮತ್ತು ಸವಾಲನ್ನು ಒಡ್ಡಿದೆ ಮತ್ತು ಅದು ಹೇಗಾದರೂ ಮಾಡಿ ಮಾನವೀಯ ಶಕ್ತಿಗಳನ್ನು ಸೋಲಿಸಲು ಪಣ ತೊಟ್ಟಿದೆ. ಹಾಗಾಗಿ ಕೇವಲ ಭಾರತ ಮಾತ್ರವಲ್ಲ ಜಗತ್ತಿನಾದ್ಯಂತ ಇರುವ ಎಲ್ಲ ಮಾನವೀಯ ಶಕ್ತಿಗಳು ಒಗ್ಗಟ್ಟಾಗಿ ಹೋರಾಡುವ ಮೂಲಕ ಉಗ್ರವಾದದ ಉಪಟಳವನ್ನು ನಿಲ್ಲಿಸಬೇಕು ಎಂದು ಹೇಳಿದರು.
ಇದೇ ವೇಳೆ 26/11ರ ಮುಂಬೈ ದಾಳಿ ನಡೆದು ಒಂಬತ್ತು ವರ್ಷಗಳು ಕಳೆದ ಸಂದರ್ಭದಲ್ಲಿ ಮೋದಿ ಆ ದುರ್ಘಟನೆಯ ಸಂತ್ರಸ್ತರನ್ನು ನೆನಪಿಸಿಕೊಂಡರು.
ಆ ಭೀಕರ ಘಟನೆಯಲ್ಲಿ ತಮ್ಮ ಜೀವವನ್ನು ಕಳೆದುಕೊಂಡ ಧೈರ್ಯಶಾಲಿ ನಾಗರಿಕರು, ಪೊಲೀಸರು, ಭದ್ರತಾ ಪಡೆಯ ಸಿಬ್ಬಂದಿಯನ್ನು ನಾವು ಸ್ಮರಿಸುತ್ತೇವೆ ಮತ್ತು ಗೌರವ ಸಲ್ಲಿಸುತ್ತೇವೆ. ಅವರ ಬಲಿದಾನವನ್ನು ನಾವೆಂದೂ ಮರೆಯುವುದಿಲ್ಲ ಎಂದು ಪ್ರಧಾನಿ ತಿಳಿಸಿದರು.
ಭಯೋತ್ಪಾದನೆ ಮಾನವತೆಗೆ ಎದುರಾಗಿರುವ ಅಪಾಯ ಎಂದು ಒತ್ತಿ ಹೇಳಿದ ಮೋದಿ ಈಗ ಜಗತ್ತಿಗೆ ಭಯೋತ್ಪಾದನೆಯ ವಿನಾಶಕಾರಿ ಆಯಾಮ ಅರಿವಿಗೆ ಬರುತ್ತಿದೆ ಎಂದು ಹೇಳಿದರು. ಕಳೆದ ನಾಲ್ಕು ದಶಕಗಳಿಂದ ಭಾರತ ಉಗ್ರವಾದದ ಸಮಸ್ಯೆಯ ಬಗ್ಗೆ ಮಾತನಾಡುತ್ತಲೇ ಬಂದಿದೆ. ಆರಂಭದಲ್ಲಿ ಜಗತ್ತು ನಮ್ಮನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಆದರೆ ಈಗ ಜಗತ್ತಿಗೂ ಭಯೋತ್ಪಾದನೆಯ ವಿನಾಶಕಾರಿ ಆಯಾಮದ ಅರಿವಾಗಿದೆ. ಇಂದು ನಾವು ಅದನ್ನು ಅತಿದೊಡ್ಡ ಸವಾಲಾಗಿ ಸ್ವೀಕರಿಸಿದ್ದೇವೆ ಎಂದು ಮೋದಿ ಹೇಳಿದರು.
ಪ್ರಧಾನ ಮಂತ್ರಿಯ ಚಾಯ್‌ವಾಲಾ ಹಿನ್ನೆಲೆಯನ್ನು ವ್ಯಂಗ್ಯ ಮಾಡಿದ್ದ ಕಾಂಗ್ರೆಸ್‌ನ ಟ್ವೀಟ್‌ವೊಂದಕ್ಕೆ ಉತ್ತರವಾಗಿ ಚುನಾವಣೆಯ ಹೊಸ್ತ್ಲಿಲ್ಲಿರುವ ಗುಜರಾತ್‌ನಲ್ಲಿ ಅಮಿತ್ ಶಾ ಮತ್ತು ಅರುಣ್ ಜೇಟ್ಲಿ ಸೇರಿದಂತೆ ಬಿಜೆಪಿಯ ಹಲವು ನಾಯಕರು ಜನರೊಂದಿಗೆ ಚಹಾ ಸೇವಿಸುತ್ತಾ ಮನ್ ಕಿ ಬಾತ್ ಆಲಿಸಿದರು. ಗುಜರಾತ್‌ನ 182 ವಿಧಾನಸಭಾ ಕ್ಷೇತ್ರಗಳ 50,128 ಚುನಾವಣಾ ಬೂತ್‌ಗಳಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಮನ್ ಕಿಬಾತ್-ಚಾಯ್ ಕೆ ಸಾಥ್ ಎಂದು ಹೆಸರಿಡಲಾಗಿತ್ತು.