ರಾಜಕೀಯ ಸಿನಿಮಾದಂತಲ್ಲ, ಹಾಗಾಗಿ ವೈಫಲ್ಯದ ಭಯವಿಲ್ಲ: ಕಮಲ್ ಹಾಸನ್

Update: 2017-11-26 14:07 GMT

ಹೊಸದಿಲ್ಲಿ, ನ.26: ರಾಜಕೀಯ ಎಂಬುದು ಸಿನಿಮಾದಂತೆ ಒಂದು ಚಿತ್ರದಿಂದ ಬಂದ ಹಣವನ್ನು ಮತ್ತೊಂದು ಸಿನಿಮಾಕ್ಕೆ ಹಾಕಿದಂತೆ ಅಲ್ಲ ಹಾಗಾಗಿ ರಾಜಕೀಯದಲ್ಲಿ ವೈಫಲ್ಯದ ಬಗ್ಗೆ ನನಗೆ ಹೆದರಿಕೆಯಿಲ್ಲ ಎಂದು ನಟ ಕಮಲ್ ಹಾಸನ್ ತಿಳಿಸಿದ್ದಾರೆ.

 “ನನಗೆ ವೈಫಲ್ಯದ ಬಗ್ಗೆ ಭಯವಿಲ್ಲ ಯಾಕೆಂದರೆ ಇದು ಸಿನಿಮಾ ಮಾಡಿದಂತೆ ಅಲ್ಲ. ಇದು ಹಣ ಮಾಡುವುದಕ್ಕೂ ಅಲ್ಲ. ಇದು ನಮ್ಮನ್ನು ನಾವು ಉತ್ತಮಗೊಳಿಸುವುದಕ್ಕಾಗಿ, ನನ್ನ ರಾಜ್ಯವನ್ನು ಉತ್ತಮಗೊಳಿಸುವುದಕ್ಕಾಗಿ ಇಟ್ಟಿರುವ ಹೆಜ್ಜೆ” ಎಂದು 63ರ ಹರೆಯದ ಕಮಲ್ ಶನಿವಾರದಂದು ಟೈಮ್ಸ್ ಡೆಲ್ಲಿ ಲಿಟ್‌ಫೆಸ್ಟ್‌ನಲ್ಲಿ ಮಾತನಾಡುವ ವೇಳೆ ತಿಳಿಸಿದರು.

ನನ್ನ ರಾಜ್ಯಕ್ಕಾಗಿ ಏನಾದರೂ ಮಾಡಬೇಕೆಂಬ ಪ್ರಯತ್ನವನ್ನೇ ಜನರು ಮೆಚ್ಚುತ್ತಾರೆ. ನಾನು ಇದರಲ್ಲಿ ತಪ್ಪಾಗಿರಲೂ ಬಹುದು. ಆದರೆ ನಾನಿದನ್ನು ಜನರಿಗಾಗಿ ಮಾಡುತ್ತಿದ್ದೇನೆ. ನಾನು ತಪ್ಪಾಗಿದ್ದಾರೆ ಅದರಲ್ಲಿ ವೈಫಲ್ಯವೇನೂ ಇಲ್ಲ. ನಾನು ಈ ರೀತಿ ಪ್ರಯತ್ನಿಸಿದೆ ಎಂಬುದೇ ಸಾಮರ್ಥ್ಯವನ್ನು ತೋರಿಸುತ್ತದೆ. ಅಂತಿಮವಾಗಿ ನಾನು ನನ್ನ ಆದರ್ಶ ರಾಜ್ಯದ ಕನಸಿನಿಂದಾಗಿ ಸೋತಿದ್ದೇನೆ. ಆದರೆ ಆ ಕನಸು ಕಾಣುವ ಧೈರ್ಯವನ್ನು ನಾನು ಮಾಡಿದ್ದೇನೆ ಎಂದು ಕಮಲ್ ತಿಳಿಸಿದರು.

ಇತರರನ್ನು ದೂಷಿಸುವ ಬದಲು ಜವಾಬ್ದಾರಿಯನ್ನು ನಮ್ಮ ಮೇಲೆಯೇ ಹಾಕಿಕೊಳ್ಳುವ ಕಾಲ ಬಂದಿದೆ. ನಾನು ರಾಜಕಾರಣಿಗಳ ಬಗ್ಗೆ ಮಾತನಾಡುತ್ತಿಲ್ಲ. ಹೌದು ಅವರು ಭ್ರಷ್ಟರಾಗಿದ್ದಾರೆ ಮತ್ತು ಸಮಾಜದ ಒಳಿತಿಗೆ ದುಡಿಯುವುದಿಲ್ಲ. ಕೆಲವೊಂದು ಬಾರಿ ಅವರು ನಮ್ಮನ್ನೇ ಹೋಲುತ್ತಾರೆ. ನಾನು ನನ್ನ ರಾಜ್ಯಕ್ಕೆ ಏನನ್ನಾದರೂ ಮಾಡಲು ಬಯಸುತ್ತೇನೆ ಎಂದು ಹಿರಿಯ ನಟ ತಿಳಿಸಿದರು.

ರಾಷ್ಟ್ರದ ರಾಜಧಾನಿಗೆ ಬಂದು ದೇಶದ ಬಗ್ಗೆ ಮಾತನಾಡದೆ ತಮಿಳುನಾಡಿನ ಬಗ್ಗೆ ಯಾಕೆ ಮಾತನಾಡುತ್ತೀರಿ ಎಂದು ಕೇಳಿದಾಗ, ದೇಶವು ಆರಂಭವಾಗುವುದೇ ಅಲ್ಲಿಂದ, ನನ್ನ ಮನೆ ಬಾಗಿಲಿನಿಂದ. ನಾನು ನನ್ನ ಮನೆ ಬಾಗಿಲನ್ನು ಮೊದಲು ಸ್ವಚ್ಛಗೊಳಿಸಲು ಬಯಸುತ್ತೇನೆ. ಮತ್ತು ಅಲ್ಲಿಂದಲೇ ನಾನು ಆರಂಭಿಸುತ್ತೇನೆ ಎಂದು ಕಮಲ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News