ಉ.ಪ್ರ. ಪೌರ ಚುನಾವಣೆ: ಲಕ್ನೋದ ಹಲವೆಡೆ ಇವಿಎಂಗಳಲ್ಲಿ ದೋಷ, ಮತದಾನ ವ್ಯತ್ಯಯ
ಲಕ್ನೋ,ನ.26: ಉತ್ತರ ಪ್ರದೇಶದಲ್ಲಿ ಪೌರಸಂಸ್ಥೆಗಳ ಚುನಾವಣೆಗೆ ಎರಡನೇ ಹಂತದ ಮತದಾನ ರವಿವಾರ ನಡೆದಿದ್ದು,ಲಕ್ನೋದ ಹಲವು ಮತಗಟ್ಟೆಗಳಲ್ಲಿ ದೋಷಪೂರಿತ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳಿಂದಾಗಿ ಮತದಾನಕ್ಕೆ ವ್ಯತ್ಯಯವುಂಟಾಗಿತ್ತು. ಬಳಿಕ ಈ ಯಂತ್ರಗಳನ್ನು ಬದಲಿಸಲಾಯಿತು.
ನ.22ರಂದು ಮೀರತ್ ಮತ್ತು ಕಾನ್ಪುರ್‌ಗಳಲ್ಲಿ ನಡೆದಿದ್ದ ಮೊದಲ ಹಂತದ ಮತದಾನದಲ್ಲಿಯೂ ದೋಷಪೂರಿತ ಇವಿಎಂಗಳಿಂದಾಗಿ ಮತದಾನಕ್ಕೆ ವ್ಯತ್ಯಯವುಂಟಾ ಗಿತ್ತು. ಯಾವುದೇ ಗುಂಡಿಯನ್ನು ಒತ್ತಿದರೂ ಮತಯಂತ್ರಗಳಲ್ಲಿ ಬಿಜೆಪಿಗೆ ಮಾತ್ರ ಮತಗಳು ದಾಖಲಾಗುತ್ತಿವೆ ಎಂದು ಮತದಾರರು ಆರೋಪಿಸಿದ್ದು, ಇವಿಎಂ ಯಂತ್ರಗಳ ಕುರಿತ ವಿವಾದ ಮತ್ತೆ ತಲೆಯೆತ್ತಿದೆ.
ಲಕ್ನೋ ಮೇಯರ್ ಹುದ್ದೆಗೆ ಬಿಎಸ್‌ಪಿ ಅಭ್ಯರ್ಥಿಯಾಗಿರುವ ಬುಲ್‌ಬುಲ್ ಗೋಡಿಯಾಲ್ ಅವರು ನ್ಯಾಯಸಮ್ಮತ ಪೌರ ಚುನಾವಣೆಗಳಿಗೆ ಆಗ್ರಹಿಸಿ ಶುಕ್ರವಾರ ಅಲಹಾಬಾದ್ ಉಚ್ಚ ನ್ಯಾಯಾಲಯದ ಲಕ್ನೋ ಪೀಠದಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಇವಿಎಂಗಳ ಜೊತೆಗೆ ವಿವಿಪಿಎಟಿ ಯಂತ್ರಗಳ ಬಳಕೆಗೂ ಅವರು ಆಗ್ರಹಿಸಿದ್ದಾರೆ.
ತನ್ನ ಅರ್ಜಿಯು ಸೋಮವಾರ ವಿಚಾರಣೆಗೆ ಬರಲಿದೆ, ಆ ವೇಳೆಗೆ ಎರಡನೇ ಹಂತದ ಮತದಾನ ಮುಗಿದಿರುತ್ತದೆ. ಆದರೆ ನ.29ರಂದು ನಡೆಯಲಿರುವ ಮೂರನೇ ಹಂತದ ಮತದಾನದಲ್ಲಿ ತನ್ನ ಅರ್ಜಿಯು ನೆರವಾಗಲಿದೆ ಎಂದು ಗೋಡಿಯಾಲ್ ಹೇಳಿದರು.
ಇವಿಎಂ ಹಸ್ತಕ್ಷೇಪದ ವಿರುದ್ಧ ಶುಕ್ರವಾರ ಕೇಂದ್ರದ ವಿರುದ್ಧ ತೀವ್ರ ದಾಳಿ ನಡೆಸಿದ್ದ ಆಪ್,ಈ ಬಗ್ಗೆ ಸ್ವತಂತ್ರ ಏಜೆನ್ಸಿಯಿಂದ ಸಮಗ್ರ ತನಿಖೆಗೆ ಆಗ್ರಹಿಸಿತ್ತು.