ಸುಧಾರಣಾ ಪ್ರಕ್ರಿಯೆಗಳನ್ನು ಸಂಘಟಿಸಲು ಇದು ಸಕಾಲ : ನೀತಿ ಆಯೋಗ
ಹೊಸದಿಲ್ಲಿ, ನ.26: ಕೇಂದ್ರ ಸರಕಾರ ಕಳೆದ 42 ತಿಂಗಳಲ್ಲಿ ಅನುಷ್ಠಾನಗೊಳಿಸಿರುವ ಜಿಎಸ್‌ಟಿ, ದಿವಾಳಿತನ ಸಂಹಿತೆ, ಬೇನಾಮಿ ಕಾಯ್ದೆ ಮುಂತಾದ ಸುಧಾರಣಾ ಪ್ರಕ್ರಿಯೆಗಳು ಉದ್ದೇಶಿತ ಫಲ ನೀಡುವಂತಾಗಲು ಇವನ್ನು ಸಂಘಟಿತಗೊಳಿಸುವ ಅಗತ್ಯವಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಸುಧಾರಣಾ ಪ್ರಕ್ರಿಯೆಗಳನ್ನು ಸಂಘಟಿಸಲು ಇದು ಸೂಕ್ತ ಸಮಯವಾಗಿದೆ. ಮುಂದಿನ 18 ತಿಂಗಳಲ್ಲಿ ಕೈಗೊಳ್ಳುವ ನೂತನ ಉಪಕ್ರಮಗಳು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದತ್ತ ಕೇಂದ್ರೀಕೃತವಾಗಿರಬೇಕು ಎಂದವರು ಹೇಳಿದ್ದಾರೆ.
ಜಿಎಸ್‌ಟಿ ಅನುಷ್ಠಾನ, ಬೇನಾಮಿ ವ್ಯವಹಾರ ಪ್ರತಿಬಂಧ ಕಾಯ್ದೆ, ದಿವಾಳಿತನ ನೀತಿ ಸಂಹಿತೆ, ಫಲಾನುಭವಿಗಳ ಖಾತೆಗಳಿಗೆ ನೇರ ಹಣದ ವರ್ಗಾವಣೆ ಮುಂತಾದ ವಿಶಿಷ್ಟ ಯೋಜನೆಗಳು ಪ್ರಮುಖ ಉಪಕ್ರಮವಾಗಿದೆ. ಮೋದಿ ಸರಕಾರ ಕಳೆದ 42 ತಿಂಗಳಲ್ಲಿ ಬಹಳಷ್ಟು ಕಾರ್ಯ ಮಾಡಿದೆ. ಇದೀಗ ಈ ಉಪಕ್ರಮಗಳನ್ನು ಸಂಘಟಿಸಿ, ಇವುಗಳನ್ನು ಯಶಸ್ವಿಗೊಳಿಸುವತ್ತ ಗಮನ ಕೇಂದ್ರೀಕರಿಸಬೇಕಿದೆ ಎಂದು ಕುಮಾರ್ ಹೇಳಿದ್ದಾರೆ.
ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಸರಕಾರ ವಿಫಲವಾಗಿದೆ ಎಂಬ ಟೀಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಅತಿರಂಜಿತ ಹೇಳಿಕೆಯಾಗಿದೆ ಎಂದರು. ಮುಂದಿನ ವರ್ಷದ ಫೆಬ್ರವರಿಯಲ್ಲಿ ಮಂಡನೆಯಾಗಲಿರುವ ಕೇಂದ್ರ ಸರಕಾರದ ಹಾಲಿ ಅವಧಿಯ ಅಂತಿಮ ಬಜೆಟ್‌ನಲ್ಲಿ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಜನಪ್ರಿಯ ಘೋಷಣೆ ಮಾಡುವ ಸಾಧ್ಯತೆಯ ಬಗ್ಗೆ ಉತ್ತರಿಸಿದ ಕುಮಾರ್, ಕೇಂದ್ರ ಸರಕಾರ ದೇಶ ಮತ್ತು ದೇಶದ ಪ್ರಜೆಗಳ ಹಿತದೃಷ್ಟಿಯಿಂದ ಯಾವುದು ಉತ್ತಮವೋ ಆ ಕಾರ್ಯ ಮಾಡುತ್ತದೆ. ಜನಮರಳು ಯೋಜನೆಯ ಬಗ್ಗೆ ಈಗಿನ ಕೇಂದ್ರ ಸರಕಾರಕ್ಕೆ ಯಾವುದೇ ನಂಬಿಕೆಯಿಲ್ಲ. ದೇಶದ ಹಿತದೃಷ್ಟಿಯಿಂದ ಯಾವುದು ಉತ್ತಮವೋ ಆ ಕಾರ್ಯ ಮಾಡಬೇಕು ಎಂದು ಪ್ರಧಾನಿ ಮೋದಿ ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದು ಹೇಳಿದರು.