×
Ad

ಲವ್ ಜಿಹಾದ್ ನಿಲ್ಲಿಸದಿದ್ದರೆ ಮುಸ್ಲಿಮರಿಗೆ ಒಬ್ಬ ಯುವತಿಯೂ ಸಿಗದಂತೆ ಮಾಡಬೇಕಾದೀತು: ಗೋಪಾಲ್ ಜಿ.

Update: 2017-11-26 20:34 IST

ಉಡುಪಿ, ನ.26: ಉಡುಪಿ ಎಂಜಿಎಂ ಕಾಲೇಜಿನ ಮೈದಾನದಲ್ಲಿ ಇಂದು ನಡೆದ ಹಿಂದೂ ಸಮಾಜೋತ್ಸವದಲ್ಲಿ ವಿಶ್ವ ಹಿಂದೂ ಪರಿಷತ್‌ನ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ಜಿ. ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದು, ಲವ್ ಜಿಹಾದ್ ನಿಲ್ಲಿಸದಿದ್ದರೆ ಮುಸ್ಲಿಮರಿಗೆ ಒಬ್ಬಳು ಹುಡುಗಿ ಕೂಡ ಸಿಗದಂತೆ ಮಾಡಬೇಕಾದಿತು ಎಂದು ಅವರು ಹೇಳಿದರು.

ಮುಸ್ಲಿಮರು ಲವ್ ಜಿಹಾದ್ ನಿಲ್ಲಿಸದಿದ್ದರೆ ನಮ್ಮ ಬಜರಂಗದಳದಲ್ಲಿಯೂ ಪ್ರೀತಿ ಮಾಡಲು ಯುವಕರಿದ್ದಾರೆ. ನಮಗೆ ರಾಮನ ಆದರ್ಶ ಮಾತ್ರವಲ್ಲ ಕೃಷ್ಣನ ಆದರ್ಶವೂ ಗೊತ್ತು. ಮುಂದೆ ಮುಸ್ಲಿಮರಿಗೆ ಮದುವೆಯಾಗಲು ಒಬ್ಬಳು ಯುವತಿ ಕೂಡ ಸಿಗದಂತೆ ಮಾಡಲಾಗುವುದು ಎಂದು ಅವರು ಹೇಳಿದರು.

ಗೋವನ್ನು ಕಡಿಯುವ ಕಟುಕನ ಕೈ ಕಡಿದ ಶಿವಾಜಿ ಮಹಾರಾಜ್ ನಮಗೆ ಆದರ್ಶ ಆಗಬೇಕು. ಗೋ ರಕ್ಷಣೆಗೆ ಎಲ್ಲರೂ ಸಂಕಲ್ಪ ಮಾಡಬೇಕು. ಕರಾವಳಿ ಯಲ್ಲಿ ಗೋ ಹತ್ಯೆ ವ್ಯಾಪಕವಾಗಿ ನಡೆಯುತ್ತಿದೆ. ಗೋವಿನ ರಕ್ಷಣೆ ಮಾಡಿ, ಅದನ್ನು ಕೊಲ್ಲಲು ಬಿಡಬೇಡಿ ಎಂದು ಅವರು ಹೇಳಿದರು.

2018ರ ಡಿಸೆಂಬರ್ ಒಳಗೆ ಅಯೋಧ್ಯೆಯ ರಾಮ ಜನ್ಮ ಭೂಮಿಯಲ್ಲಿಯೇ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಗೋಪಾಲ್ ಜಿ. ತಿಳಿಸಿದರು.

ಸ್ವಾತಂತ್ರ ಸಿಗುವ ಸಂದರ್ಭದಲ್ಲಿ ಭಾರತದಲ್ಲಿದ್ದ ಶೇ. 93ರಷ್ಟಿದ್ದ ಹಿಂದೂ ಸಂಖ್ಯೆ ಈಗ ಶೇ. 80ಕ್ಕೆ ಇಳಿದಿದೆ. ಪಾಕಿಸ್ತಾನದಲ್ಲಿ ಶೇ.11ರಿಂದ ಶೇ. 2ಕ್ಕೆ, ಬಾಂಗ್ಲಾದೇಶದಲ್ಲಿ ಶೇ. 29ರಿಂದ ಶೇ. 8ಕ್ಕೆ ಇಳಿದಿದೆ. ಇದಕ್ಕೆ ಕಾರಣ ಮತಾಂತರ ಮತ್ತು ಲವ್ ಜಿಹಾದ್ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News