ರಾಷ್ಟ್ರೀಯ ಹಾಲು ಉತ್ಪಾದಕರ ದಿನಾಚರಣೆ
ಮಂಗಳೂರು, ನ.26: ಕ್ಷೀರ ಕ್ರಾಂತಿಯನ್ನು ಆರಂಭಿಸಿದ ಡಾ. ವರ್ಗೀಸ್ ಕುರಿಯನ್ ದೇಶದ ಸಾಮಾನ್ಯ ನಾಗರಿಕರ ಆಶಾಕಿರಣವಾಗಿದ್ದರು. ಅವರ ಸಾಧನೆಗೆ ಅಂದಿನ ಪ್ರಧಾನಿ ಶಾಸಿ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕುರಿಯನ್‌ರ ಆದರ್ಶದಂತೆ ನಡೆದಿರುವ ದ.ಕ.ಹಾಲು ಒಕ್ಕೂಟವು ಇಂದು ದೇಶದ ಅತ್ಯುನ್ನತ ಒಕ್ಕೂಟವಾಗಿ ಗುರುತಿಸಿಕೊಂಡಿದೆ ಎಂದು ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಕೆ.ಎಂ.ಉಡುಪ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ರಾಷ್ಟ್ರೀಯ ಹಾಲು ಉತ್ಪಾದಕರ ದಿನದ ಅಂಗವಾಗಿ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ರವಿವಾರ ನಡೆದ ಡಾ. ವರ್ಗೀಸ್ ಕುರಿಯನ್ ಕುರಿತ ಪುಸ್ತಕ ಬಿಡುಗಡೆ ಹಾಗೂ ಒಕ್ಕೂಟವು ರಾಷ್ಟ್ರೀಯ ಡೈರಿ ಎಕ್ಸಲೆನ್ಸ್ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಿಲ್ಲೆಯ ಹಾಲು ಒಕ್ಕೂಟಕ್ಕೆ ಸಂಬಂಧಪಟ್ಟಂತೆ ಡಾ. ಟಿ.ಎ.ಪೈ ನೆನಪಾಗುತ್ತಾರೆ. ಅವರು ಕೆನರಾ ಹಾಲು ಉತ್ಪಾದಕರ ಒಕ್ಕೂಟದ ಮೂಲಕ ಜಿಲ್ಲೆಯ ಹಾಲು ಉತ್ಪಾದನೆಗೆ ನಾಂದಿ ಹಾಡಿದ್ದರು. ಹೀಗಾಗಿ ಡಾ ಟಿ.ಎ.ಪೈಗಳ ಸೇವೆಯನ್ನೂ ಸ್ಮರಿಸಬೇಕು ಎಂದು ಕೆ.ಎಂ.ಉಡುಪ ನುಡಿದರು.
ಸಂಘಟಿತ ಪ್ರಯತ್ನದಿಂದ ದ.ಕ.ಹಾಲು ಒಕ್ಕೂಟಕ್ಕೆ ರಾಷ್ಟ್ರ ಪ್ರಶಸ್ತಿ ದೊರೆತಿದೆ. ಈ ಪ್ರಶಸ್ತಿಯನ್ನು ಒಕ್ಕೂಟದ ವ್ಯಾಪ್ತಿಯ ಎಲ್ಲ ಸಂಘಗಳಿಗೆ ಸಮರ್ಪಿಸಲಾಗುತ್ತಿದ್ದು, ಅದನ್ನು ಕಾಯ್ದುಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ್ ಹೆಗ್ಡೆ ಹೇಳಿದರು.
ಈ ಸಂದರ್ಭ ನಂದಿನಿ ಉತ್ತಮ ಡೀಲರ್‌ಗಳಿಗೆ ಬಹುಮಾನ, ಡೀಲರ್‌ಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಡಾ. ವರ್ಗೀಸ್ ಕುರಿಯನ್ ಕುರಿತ ಕನ್ನಡ ಪುಸ್ತಕ ಬರೆದ ಡಾ. ಮಹಾಬಲೇಶ್ವರ ರಾವ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಒಕ್ಕೂಟದ ನಿರ್ದೇಶಕರಾದ ಸವಣೂರು ಕೆ.ಸೀತಾರಾಮ ರೈ, ಬಿ.ನಿರಂಜನ್, ನವೀನ್‌ಚಂದ್ರ ಜೈನ್, ಜಾನಕಿ ಹಂದೆ, ಟಿ.ಸೂರ್ಯ ಶೆಟ್ಟಿ, ನಾರಾಯಣಪ್ರಕಾಶ್ ಕೆ, ಅಶೋಕ್‌ಕುಮಾರ್ ಶೆಟ್ಟಿ, ಪದ್ಮನಾಭ ಶೆಟ್ಟಿ, ಡಾ. ಕೃಷ್ಣ ಭಟ್, ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ.ಸಲೀಂ ಉಪಸ್ಥಿತರಿದ್ದರು. ಒಕ್ಕೂಟದ ಮಾರುಕಟ್ಟೆ ವಿಭಾಗದ ಡಾ.ಹೇಮಶೇಖರ್ ಪುರಸ್ಕೃತರ ವಿವರ ವಾಚಿಸಿದರು. ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ.ಸತ್ಯನಾರಾಯಣ ಸ್ವಾಗತಿಸಿದರು.