×
Ad

ವಿಶ್ವದ ಸೂಪರ್ ಪವರ್ ರಾಷ್ಟ್ರವಾಗಿ ಭಾರತ: ಸುರೇಂದ್ರ ಕೆ. ಜೈನ್

Update: 2017-11-26 20:51 IST

ಉಡುಪಿ, ನ.26: ಭಾರತವನ್ನು ವಿಶ್ವದ ಸೂಪರ್ ಪವರ್ ರಾಷ್ಟ್ರವಾಗಿ ರೂಪಿಸಬೇಕು. ವಿಶ್ವದ ಶಕ್ತಿಯುತ ರಾಷ್ಟ್ರವಾಗಿ ನಿರ್ಮಾಣ ಮಾಡಬೇಕು ಎಂಬುದು ಉಡುಪಿಯ ರಾಯಲ್ ಗಾರ್ಡನ್‌ನಲ್ಲಿ ಮೂರು ದಿನಗಳ ಕಾಲ ವಿಶ್ವ ಹಿಂದು ಪರಿಷತ್ ಆಶ್ರಯದಲ್ಲಿ ನಡೆದ 15ನೇ ಧರ್ಮ ಸಂಸದ್‌ನ ಒಂದಂಶದ ನಿರ್ಣಯವಾಗಿದೆ ಎಂದು ವಿಎಚ್‌ಪಿಯ ಸಂಯುಕ್ತ ಪ್ರಧಾನ ಕಾರ್ಯದರ್ಶಿ ಸುರೇಂದ್ರಕುಮಾರ್ ಜೈನ್ ಘೋಷಿಸಿದ್ದಾರೆ.

ಮೂರು ದಿನಗಳ ಕಾಲ ನಡೆದ ಧರ್ಮಸಂಸದ್‌ನ ಕೊನೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಾರಿ ಸಂತರ, ಮಠಾಧಿಪತಿಗಳ ಹಾಗೂ ಪೇಜಾವರ ಶ್ರೀಗಳ ಮಾರ್ಗದರ್ಶನ ದಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದವರು ಹೇಳಿದರು.

ಪ್ರಮುಖ ವಿಷಯವಾದ ರಾಮಜನ್ಮಭೂಮಿ, ರಾಮ ಮಂದಿರದ ಕುರಿತಂತೆ ಯಾವುದೇ ನಿರ್ಣಯವನ್ನು ಕೈಗೊಳ್ಳದಿರುವತ್ತ ಅವರ ಗಮನ ಸೆಳೆದಾಗ, ಏಕೆಂದರೆ 1984ರಿಂದಲೇ ಧರ್ಮಸಂಸದ್ ಈ ಬಗ್ಗೆ ನಿರ್ಣಯ ಗಳನ್ನು ಮಾಡುತ್ತಾ ಬಂದಿದೆ. ರಾಮ ಮಂದಿರದ ಬೀಗ ತೆಗೆಯುವ ನಿರ್ಣಯವನ್ನು 1985ರಲ್ಲಿ ಇಲ್ಲೇ ನಡೆದ ಎರಡನೇ ಧರ್ಮಸಂಸದ್‌ನಲ್ಲಿ ಕೈಗೊಳ್ಳಲಾಗಿತ್ತು. ಅದು ಶೀಘ್ರವೇ ಕೈಗೂಡಿದೆ ಎಂದರು.

ಇದು ನಿರ್ಣಯ ಕೈಗೊಳ್ಳುವ ಸಮಯವಲ್ಲ. ಆದ ನಿರ್ಣಯಗಳನ್ನು ಕಾರ್ಯರೂಪಕ್ಕೆ ತರುವ ಸಮಯ. 2018ರ ಅಕ್ಟೋಬರ್ ತಿಂಗಳಲ್ಲಿ ರಾಮ ಮಂದಿರದ ನಿರ್ಮಾಣ ಕಾರ್ಯ ಪ್ರಾರಂಭಗೊಳ್ಳಲಿದ್ದು, 2019ರ ಕೊನೆಯೊಳಗೆ ರಾಮಮಂದಿರ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿದೆ ಎಂದು ಶ್ರೀ ಪೇಜಾವರ ಶ್ರೀಗಳು ಈಗಾಗಲೇ ಘೋಷಿಸಿದ್ದಾರೆ ಎಂದು ಎಸ್.ಕೆ.ಜೈನ್ ತಿಳಿಸಿದರು.

ಸಂವಿಧಾನ ತಿದ್ದುಪಡಿಗೆ ಆಗ್ರಹ: ದೇಶದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಹಲವು ಶಾಸಕೀಯ ಸೌಲಭ್ಯಗಳು ದೊರೆಯುತಿದ್ದು, ಇವುಗಳು ಧಾರ್ಮಿಕ ಬಹುಸಂಖ್ಯಾತರಿಗೆ ಸಿಗುತ್ತಿಲ್ಲ. ಇದರಿಂದ ಬಹಳಷ್ಟು ಧಾರ್ಮಿಕ ಬಹುಸಂಖ್ಯಾ ಮತಗಳು ತಮ್ಮನ್ನು ಅಲ್ಪಸಂಖ್ಯಾತ ಶ್ರೇಣಿಗೆ ಸೇರ್ಪಡೆಗೊಳಿಸಲು ಹೋರಾಟ ನಡೆಸುತ್ತಿವೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಸಹ ತನ್ನ ಆತಂಕವನ್ನು ವ್ಯಕ್ತಪಡಿಸಿದೆ. ಇದನ್ನು ತಡೆಯಲು ದೇಶದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಿಗುವ ಎಲ್ಲಾ ಸೌಲಭ್ಯಗಳು ಧಾರ್ಮಿಕ ಬಹುಸಂಖ್ಯಾತರಿಗೂ ಸಿಗುವಂತಾಗಲು ಸಂವಿಧಾನದ ತಿದ್ದುಪಡಿಗೆ ಮುಂದಾಗುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಲಾಯಿತು.

ಈ ಕುರಿತು ಪ್ರಸ್ತಾವವನ್ನು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಮಂಡಿಸಿದ್ದರು. ದೇಶದಲ್ಲಿ ಏಕರೂಪದ ನಾಗರಿಕ ನೀತಿ ಸಂಹಿತೆಯನ್ನು ಜಾರಿಗೆ ಧರ್ಮಸಂಸದ್ ಒತ್ತಾಯಿಸುತ್ತದೆ ಎಂದ ಜೈನ್, ದೇಶದ ಗೋಹತ್ಯೆ ಹಾಗೂ ಗೋಮಾಂಸದ ರಫ್ತನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಂತರು ಏಕಮತದಿಂದ ಒತ್ತಾಯಿಸಿದರು ಎಂದರು. ಭಾರತದಿಂದ ಗೋಮಾಂಸ ರಫ್ತಾಗುವ ಪಾಯಿಂಟ್‌ಗಳಲ್ಲಿ ಅವುಗಳ ಡಿಎನ್‌ಎ ಪರೀಕ್ಷೆ ನಡೆಸಬೇಕು ಎಂದರು.

ಆದಿತ್ಯನಾಥ್ ಬರೀ ಸಂತನಲ್ಲ: ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆಯುವ ಹಿಂದೂ ಸಮಾಜೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಬೇಕಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಗೈರುಹಾಜರಿ ಕುರಿತು ಪ್ರಶ್ನಿಸಿದಾಗ, ಅವರು ಬರೀ ಸಂತ ಮಾತ್ರವಲ್ಲ ಒಂದು ರಾಜ್ಯದ ಮುಖ್ಯಮಂತ್ರಿ ಸಹ ಆಗಿದ್ದಾರೆ. ಮುಖ್ಯಮಂತ್ರಿಗೆ ಹಲವು ರಾಜನೀತಿಗಳಿರುತ್ತವೆ. ಅಲ್ಲದೇ ಈಗ ಉತ್ತರ ಪ್ರದೇಶದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ನಡೆಯುತ್ತಿದೆ. ಅದರಲ್ಲಿ ಅವರು ಬ್ಯುಸಿಯಾಗಿದ್ದಾರೆ ಎಂದರು. ಸಮಾಜೋತ್ಸವದಲ್ಲಿ ಆದಿತ್ಯನಾಥ್ ಕೊರತೆಯಾಗಲ್ಲ. ಆ ಜಾಗ ತುಂಬಿಸಬಲ್ಲ ಹಲವು ಸಮರ್ಥ ನಾಯಕರು ಸಭೆಯಲ್ಲಿ ಮಾತನಾಡುತ್ತಾರೆ. ಯಾರೂ ನಿರಾಶರಾಗಬೇಕಿಲ್ಲ ಎಂದು ಸುರೇಂದ್ರ ಕುಮಾರ್ ಜೈನ್ ಹೇಳಿದರು.

ಸಾಮರಸ್ಯ, ಸಹಬಾಳ್ವೆ ಇಂದಿನ ಅಗತ್ಯತೆ
ಉಡುಪಿ : ಹಿಂದೂ ಧರ್ಮದಲ್ಲಿರುವ ಮೇಲು-ಕೀಳು, ಸ್ಪಶ್ಯ- ಅಸ್ಪಶ್ಯತೆ ಎಂಬುದು ಕಳಂಕವಾಗಿದ್ದು, ಅವುಗಳನ್ನು ನಾವು ತೊರೆಯಲೇ ಬೇಕಾಗಿದೆ. ನಮ್ಮಳಗೆ ಸಹಬಾಳ್ವೆ, ಸಾಮರಸ್ಯದ ಜೀವನ ಇಂದಿನ ಅಗತ್ಯತೆ ಯಾಗಿದೆ ಎಂದು ವಿಎಚ್‌ಪಿಯ ಸಂಯುಕ್ತ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕುಮಾರ್ ಜೈನ್ ಹೇಳಿದ್ದಾರೆ.

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ವಿಎಚ್‌ಪಿ ವತಿಯಿಂದ ಆಯೋಜಿಸಲಾದ ಸಮಾಜ ಪ್ರಮುಖರ ಸಭೆ ಹಾಗೂ ಸಾಮಾಜಿಕ ಸಾಮರಸ್ಯ ವಿಚಾರಗೋಷ್ಠಿಯನ್ನು ಪೇಜಾವರ ಶ್ರೀಗಳ ಅನುಪಸ್ಥಿತಿಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತಿದ್ದರು.

ಹಿಂದೂ ಧರ್ಮಕ್ಕೆ ಕಳಂಕವೆನಿಸಿದ ಅಸ್ಪಶ್ಯತೆಯನ್ನು ತೊಡೆದು ಹಾಕಲು ಸಂತರು ದೃಢ ನಿರ್ಧಾರ ಮಾಡಿದ್ದು, ಇದರಿಂದ ಡಾ. ಭೀಮರಾವ್ ಅಂಬೇಡ್ಕರ್ ಸಂಕಲ್ಪ ಇಂದು ಈಡೇರುತ್ತಿದೆ. ಎಲ್ಲಾ ಹಿಂದೂಗಳು ಸಾಮರಸ್ಯ, ಸಹಬಾಳ್ವೆಗೆ ನಾಂದಿ ಹಾಡಲಾಗುತ್ತಿದೆ. ಗೋಮಾಂಸವನ್ನು ನಾನು ತಿನ್ನುತ್ತೇನೆ ಎಂದು ಬಹಿರಂಗವಾಗಿ ಹೇಳುವ ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ಗೆಲುವುದಿಲ್ಲ ಎಂದರು.

ದೇಶದಲ್ಲೀಗ ಹಿಂದೂಗಳು ಅಲ್ಪಸಂಖ್ಯಾತರಾಗುವ ಸ್ಥಿತಿ ಬಂದಿದೆ. ನಾವು ಹಿಂದೂಗಳಾಗಿ ಉಳಿಯಬೇಕು. ಅದುವೆ ನಮ್ಮ ಗುರುತು. ದೇಶದ ವಿರೋಧಿ ಬಾಬರ್ ಎಂದೂ ದೇಶದ ಸನ್ಮಾನಿತ ವ್ಯಕ್ತಿಯಾಗುವುದಿಲ್ಲ. ಬಾಬರ್, ಅಫ್ಝಲ್ ಜೊತೆ ನಿಂತವರು ಮಾತ್ರ ರಾಮಮಂದಿರ ನಿರ್ಮಾಣವನ್ನು ವಿರೋಧಿಸುತ್ತಿದ್ದಾರೆ. 2018 ಅಕ್ಟೋಬರ್‌ನಿಂದ ರಾಮಮಂದಿರ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ. ಮುಂದಿನ ಧರ್ಮ ಸಂಸತ್ ಅಯೋದ್ಯದಲ್ಲಿ ನಡೆಯುತ್ತಿದೆ ಎಂದವರು ಹೇಳಿದರು.

ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ಸಂಘ ಪರಿವಾರದ ಕಾರ್ಯಕರ್ತರು, ಪದಾಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಕೆಲವು ಸ್ವಾಮೀಜಿಗಳು ಎಡಪಂಥದತ್ತ ಒಲವನ್ನು ಹೊಂದಿದ್ದು, ಅವರೊಂದಿಗೆ ಸಂಘ ಪರಿವಾರ ಮಾತನಾಡಿ ಇತ್ತ ಸೆಳೆಯಬೇಕು ಎಂದು ಚಿತ್ರದುರ್ಗದ ತಿಪ್ಪೇಸ್ವಾಮಿ ಹೇಳಿದರೆ, ಬೆಳಗಾವಿಯ ಡಾ.ಅನಿಲ್ ಕುಮಾರ್ ಎಂಬವರು ಬಸವಣ್ಣನನ್ನು ವಿಎಚ್‌ಪಿ ಬಳಸಿಕೊಂಡು ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

  ವಿಎಚ್‌ಪಿ ದಕ್ಷಿಣ ಪ್ರಾಂತ ಅಧ್ಯಕ್ಷೆ ಡಾ.ವಿಜಯಲಕ್ಷ್ಮಿ ದೇಶಮಾನಿ, ಉಪಾಧ್ಯಕ್ಷ ಶಂಕರಪ್ಪ, ಉತ್ತರ ಪ್ರಾಂತದ ಅಧ್ಯಕ್ಷ ಡಾ. ಎಸ್.ಆರ್. ರಾಮನ ಗೌಡ, ಉಪಾಧ್ಯಕ್ಷ ವಿಜಯಲಕ್ಷ್ಮಿ ಹಿರೇಮಠ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉತ್ತರ ಪ್ರಾಂತದ ಪ್ರಧಾನ ಕಾರ್ಯದರ್ಶಿ ಗೋವರ್ಧನ ರಾವ್ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News