ನ್ಯಾಯಾಧೀಶರು ಕಾರ್ಯಾಂಗ ಮತ್ತು ಶಾಸಕಾಂಗದಲ್ಲಿ ಹಸ್ತಕ್ಷೇಪವನ್ನು ನಿಲ್ಲಿಸಬೇಕು: ರವಿಶಂಕರ್ ಪ್ರಸಾದ್
ಹೊಸದಿಲ್ಲಿ, ನ.26: ಸಂವಿಧಾನಾತ್ಮಕ ನ್ಯಾಯಾಲಯಗಳ ನ್ಯಾಯಿಕ ಕ್ರಿಯಾವಾದ (ಜುಡಿಶಿಯಲ್ ಆ್ಯಕ್ಟಿವಿಸಮ್) ವನ್ನು ಟೀಕಿಸಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ನ್ಯಾಯಾಧೀಶರು ಸೂಪರ್ ಕಾರ್ಯಾಂಗ ಅಥವಾ ಸೂಪರ್ ಶಾಸಕಾಂಗದ ಪಾತ್ರವನ್ನು ನಿಭಾಯಿಸುವುದನ್ನು ನಿಲ್ಲಿಸಬೇಕು ಎಂದು ತಿಳಿಸಿದರು.
ಸರ್ವೋಚ್ಛ ನ್ಯಾಯಾಲಯ ಆಯೋಜಿಸಿದ್ದ ಸಂವಿಧಾನದ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಕಾನೂನು ಸಚಿವರು, ನ್ಯಾಯಾಂಗದಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆ ನ್ಯಾಯಾಂಗ ಸ್ವಾತಂತ್ರದಷ್ಟೇ ಮುಖ್ಯವಾಗಿದೆ ಎಂದು ಹೇಳಿದರು. ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ಮಧ್ಯೆ ಸಮತೋಲನ ಸ್ಥಾಪಿಸುವ ಮೂಲಕ ಒತ್ತಡವನ್ನು ಕಡಿಮೆ ಮಾಡಬೇಕು ಎಂದವರು ತಿಳಿಸಿದರು.
ಶನಿವಾರದಂದು ನಡೆದ ರಾಷ್ಟ್ರೀಯ ಕಾನೂನು ದಿನಾಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ಭಾರತೀಯ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಜುಡಿಶಿಯಲ್ ಆ್ಯಕ್ಟಿವಿಸಮ್ ಬಗ್ಗೆ ಗಮನ ಸೆಳೆದಿದ್ದರು.
ಸರಕಾರದ ನೀತಿಗಳಿಂದ ಜನರ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ನ್ಯಾಯಾಧೀಶರು ಸ್ವಪ್ರೇರಣೆಯಿಂದ ಹಸ್ತಕ್ಷೇಪ ಮಾಡುವುದನ್ನು ಮುಖ್ಯ ನ್ಯಾಯಾಧೀಶರಾದ ಮಿಶ್ರಾ ಸಮರ್ಥಿಸಿದರೆ ನ್ಯಾಯಾಧೀಶರು ಸರಕಾರಕ್ಕೆ ನಿರ್ದೇಶನ ನೀಡಬಹುದು ಆದರೆ ನೇರವಾಗಿ ಕಾರ್ಯಾಂಗದ ಕೆಲಸವನ್ನು ಅವರೇ ಮಾಡುವಂತಿಲ್ಲ ಎಂದು ಜೇಟ್ಲಿ ತಿಳಿಸಿದ್ದರು.
ರೊಹಿಂಗ್ಯಾ ನಿರಾಶ್ರಿತರ ಸಮಸ್ಯೆಗೆ ಸಂಬಂಧಪಟ್ಟಂತೆ ಕೇಂದ್ರ ಸರಕಾರವು ಅದು ಸರಕಾರದ ನೀತಿಯ ವಿಷಯವಾಗಿದೆ ಎಂದು ಸರ್ವೋಚ್ಛ ನ್ಯಾಯಾಲಯದಲ್ಲಿ ವಾದಿಸಿದರೆ ರೊಹಿಂಗ್ಯಾಗಳ ಮಹಿಳೆಯರು, ವೃದ್ಧರು ಮತ್ತು ಮಕ್ಕಳ ಮೂಲಭೂತ ಹಕ್ಕುಗಳ ಉಲ್ಲಂಘನೆ ಕಂಡು ಬಂದರೆ ನ್ಯಾಯಾಲಯವು ಮಧ್ಯ ಪ್ರವೇಶಿಸುವುದಾಗಿ ಸರ್ವೋಚ್ಛ ನ್ಯಾಯಾಲಯ ತಿಳಿಸಿತ್ತು. ಈ ಕಾರಣದಿಂದ ಜುಡಿಶಿಯಲ್ ಆ್ಯಕ್ಟಿವಿಸಮ್ ವಿಷಯ ಪ್ರಾಮುಖ್ಯತೆ ಪಡೆದುಕೊಂಡಿತು.
ದೇಶದ ಮೂರು ಅಂಗಗಳಾದ ಸರಕಾರ, ನ್ಯಾಯಾಂಗ ಮತ್ತು ಶಾಸಕಾಂಗದ ಪ್ರಮುಖ ಉದ್ದೇಶ ಸಂವಿಧಾನ ಮತ್ತು ಅದರ ತತ್ವವನ್ನು ರಕ್ಷಿಸುವುದೇ ಆಗಿದೆ ಎಂದು ತಿಳಿಸಿದ ಮಿಶ್ರಾ ಸಂವಿಧಾನದ ಧರ್ಮ, ಅದರ ನೀತಿಗಳು, ವೌಲ್ಯ ಮತ್ತು ತತ್ವವೇ ಶ್ರೇಷ್ಠ ಎಂದು ಒತ್ತಿ ಹೇಳಿದರು.
ಜನರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದ್ದರೆ ನ್ಯಾಯಾಂಗವು ಅವರ ಪರವಾಗಿ ನಿಲ್ಲಲು ಬದ್ಧವಾಗಿದೆ. ಮೂಲಭೂತ ಹಕ್ಕುಗಳ ರಕ್ಷಣೆ ಪ್ರಮುಖವಾದುದು ಮತ್ತು ಅದರ ಅಜೇಯತೆಯೇ ಸಂವಿಧಾನದ ಮೂಲ ಉದ್ದೇಶವಾಗಿದೆ ಎಂದು ಮುಖ್ಯ ನ್ಯಾಯಾಧೀಶರು ತಿಳಿಸಿದರು.
ಆದರೆ ದೇಶದ ಇತರ ಅಂಗಗಳಲ್ಲಿರುವ ಬಿರುಕನ್ನು ತುಂಬಲು ನ್ಯಾಯಿಕ ಕ್ರಿಯಾವಾದ ಪ್ರಯತ್ನಿಸುತ್ತಿದೆ ಎಂದು ವಾದಿಸುವುದು ತಪ್ಪಾಗುತ್ತದೆ ಎಂದು ಜೇಟ್ಲಿ ತಿಳಿಸಿದರು.
ಇತ್ತೀಚೆಗೆ ಕೇಂದ್ರ ಅರೆಸೇನಾ ಪಡೆಯನ್ನು ಶಾಂತಿಯುತ ಡಾರ್ಜಿಲಿಂಗ್‌ನಿಂದ ಚುನಾವಣೆಗೆ ಸಜ್ಜಾಗಿರುವ ಹಿಮಾಚಲ ಪ್ರದೇಶಕ್ಕೆ ವರ್ಗಾಯಿಸಿದರ ವಿರುದ್ಧ ಕಲ್ಕತ್ತಾ ಉಚ್ಛ ನ್ಯಾಯಾಲಯವು ತಡೆಯನ್ನು ನೀಡಿ ನಂತರ ಸರ್ವೋಚ್ಛ ನ್ಯಾಯಾಲಯ ಈ ತೀರ್ಪನ್ನು ಕಾದಿರಿಸಿದ ಉದಾಹರಣೆಯನ್ನು ನೀಡಿದ ಜೇಟ್ಲಿ, ಈ ಘಟನೆ ನ್ಯಾಯಾಂಗವು ಯಾವ ರೀತಿ ಸೇನಾ ವರ್ಗಾವಣೆಯಂಥಾ ಕಾರ್ಯಾಂಗದ ನಿರ್ಧಾರಗಳಲ್ಲೂ ಹಸ್ತಕ್ಷೇಪ ಮಾಡುತ್ತಿದೆ ಎಂಬುದಕ್ಕೆ ಉದಾಹರಣೆಯಾಗಿದೆ ಎಂದು ಹೇಳಿದರು.