ಮಂಗಳೂರಿನಲ್ಲಿ ಮಹಿಳೆಯರ ‘ಗುಲಾಬಿ ನಡಿಗೆ’ ಕಾರ್ಯಕ್ರಮ
ಮಂಗಳೂರು, ನ.26: ಮೆಡಿಮೇಡ್ ಸೊಲ್ಯೂಶನ್ಸ್ ಸಂಸ್ಥೆಯು ನಗರದ ಲಯನ್ಸ್, ಇನ್ನರ್ ವ್ಹೀಲ್ ಮತ್ತು ವಿವಿಧ ಮಹಿಳಾ ಕ್ಲಬ್‌ಗಳ ಸಹಯೋಗದಲ್ಲಿ ಆರೋಗ್ಯ ಮತ್ತು ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ರವಿವಾರ ನಗರದಲ್ಲಿ ಮಹಿಳೆಯರಿಗಾಗಿಯೇ ‘ನಡಿಗೆ ಮತ್ತು ಓಟ’ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಆರೋಗ್ಯಕರ ಜೀವನದೊಂದಿಗೆ ಮಹಿಳಾ ಸಬಲೀಕರಣದ ಉದ್ದೇಶವಿರಿಸಿ ಏರ್ಪಡಿಸಲಾದ ಈ ನಡಿಗೆಗೆ ‘ಗುಲಾಬಿ ನಡಿಗೆ’ ಎಂದು ಹೆಸರಿಸಿರುವುದು ಗಮನಾರ್ಹ.
ಮುಂಜಾನೆ ಸುಮಾರು 6 ಗಂಟೆಗೆ ನಡಿಗೆ ಮತ್ತು ಓಟವನ್ನು ಆರಂಭಿಸಲಾಯಿತು. 10ರಿಂದ 15 ವರ್ಷದ ಬಾಲಕಿಯರು ಮತ್ತು 15ರಿಂದ 70 ವರ್ಷದ ಹಿರಿಯರು ಎಂಬ ಎರಡು ವಿಭಾಗಗಳಲ್ಲಿ ಮಹಿಳೆಯರು ಭಾಗವಹಿಸಿದ್ದರು.
ಬಂಟ್ಸ್‌ಹಾಸ್ಟೆಲ್‌ನಿಂದ ಬೆಂದೂರ್‌ವೆಲ್ ಮತ್ತು ಮಲ್ಲಿಕಟ್ಟೆಯಿಂದ ಬಂಟ್ಸ್‌ಹಾಸ್ಟೆಲ್‌ಗೆ ಆಯೋಜಿಸಲಾದ ಓಟದಲ್ಲಿ 1,000 ಮಂದಿ ಭಾಗವಹಿಸಿದ್ದರು.
ಕಾರ್ಯಕ್ರಮ ಸಂಘಟಕ ಬಿಜೈಯ ‘ದಿ ಆರೋಗ್ಯ’ದ ಮುಖ್ಯಸ್ಥೆ ರೇಷ್ಮಾ ರಾವ್ ಮಾತನಾಡಿ, ಹೊಸದೆಹಲಿ ಮತ್ತಿತರ ಮೆಟ್ರೋ ಪಾಲಿಟನ್ ಸಿಟಿಗಳಲ್ಲಿ ಮಹಿಳೆಯರಿಗಾಗಿ ಇಂತಹ ಓಟ ಮತ್ತು ನಡಿಗೆ ಕಾರ್ಯಕ್ರಮವು ಆಗಾಗ ನಡೆಯುತ್ತಿವೆ. ಅದರಂತೆ ಇಂದು ಮಂಗಳೂರಿನಲ್ಲಿ ಮೊದಲ ಬಾರಿಗೆ ಇಂತಹ ಕಾರ್ಯಕ್ರಮ ಆಯೋಹಿಸಲಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಓಟ ಮತ್ತು ನಡಿಗೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಪದಕ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಅತ್ಯುತ್ತಮ ಪೋಷಾಕಿನಲ್ಲಿ ಕಂಗೊಳಿಸಿದ ವ್ಯಕ್ತಿ ಮತ್ತು ತಂಡಕ್ಕೆ ಓಟ-ನಡಿಗೆಯ ಉದ್ದೇಶ ಬಿಂಬಿಸುವ ರೂಪಕ, ಉತ್ತಮ ಘೋಷವಾಕ್ಯ ಸಿದ್ಧಪಡಿಸಿದವರಿಗೆ ಬಹುಮಾನ ನೀಡಲಾಯಿತು. ಭಾರೀ ಸಂಖ್ಯೆಯಲ್ಲಿ ಪಾಲ್ಗೊಂಡ ತಂಡಕ್ಕೂ ಬಹುಮಾನ ವಿತರಿಸಲಾಯಿತು.