ಇಸ್ಲಾಮಾಬಾದ್: ಶಾಂತಿಪಾಲನೆಗೆ ಸೇನೆಗೆ ಬುಲಾವ್
ಇಸ್ಲಾಮಾಬಾದ್,ನ.26: ಪಾಕ್ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ತೀವ್ರವಾದಿ ಧಾರ್ಮಿಕ ಗುಂಪುಗಳಿಗೆ ಸೇರಿದ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಶನಿವಾರ ನಡೆದ ಭೀಕರ ಘರ್ಷಣೆಯಲ್ಲಿ ಮೃತರಾದವರ ಸಂಖ್ಯೆ 6ಕ್ಕೇರಿದೆ ಹಾಗೂ 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ರಾಜಧಾನಿಯಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಮರುಸ್ಥಾಪಿಸಲು ಸೇನೆಯನ್ನು ಕರೆಸಲಾಗಿದೆ. ಸುಮಾರು ಮೂರು ವಾರಗಳಿಂದ ಇಸ್ಲಾಮಾಬಾದ್‌ಗೆ ತೆರಳುವ ದೇಶದ ಪ್ರಮುಖ ಹೆದ್ದಾರಿಗಳನ್ನು ಕೆಲ ಸಂಘಟನೆಗಳ ಕಾರ್ಯಕರ್ತರು ತಡೆಗಟ್ಟಿದ್ದರು. ಇವರನ್ನು ಚದುರಿಸಲು ಶನಿವಾರ ಅರೆಸೈನಿಕ ಪಡೆಗಳು, ಫ್ರಂಟಿಯರ್ ಕಾನ್ಸ್‌ಟೇಬಲರಿ ಪಡೆಗಳ ನೆರವಿನೊಂದಿಗೆ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿದಾಗ, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಘರ್ಷಣೆಯಲ್ಲಿ 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಹಿಂಸಾಚಾರದ ಬೆನ್ನಲ್ಲೇ ಪಾಕ್ ಗೃಹ ಸಚಿವಾಲಯವು ಇಸ್ಲಾಮಾಬಾದ್‌ನಲ್ಲಿ ಕಾನೂನು ಮತ್ತು ಶಿಸ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ಸೇನೆಯನ್ನು ನಿಯೋಜಿಸುವ ಆದೇಶವನ್ನು ಹೊರಡಿಸಿತ್ತು.
ರಾಜಧಾನಿಯಲ್ಲಿ ಸೇನೆ ನಿಯೋಜನೆಗೆ ಸಂಬಂಧಿಸಿ ಪಾಕ್ ಪ್ರಧಾನಿ ಶಹೀದ್ ಖಾಖನ್ ಅಬ್ಬಾಸಿ ಹಾಗೂ ಸೇನಾ ಪಡೆ ವರಿಷ್ಠ ಖಮರ್ ಜಾವೇದ್ ಬಾಜ್ವಾ ಸಭೆ ನಡೆಸುವ ನಿರೀಕ್ಷೆಯಿದೆ. ಆದಾಗ್ಯೂ ಪರಿಸ್ಥಿತಿಯನ್ನು ನಿಯಂತ್ರಿಸಲು ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ತೆರಳುವ ಮೊದಲು ತನಗೆ ಘಟನಾವಳಿಗಳ ಕುರಿತಾಗಿ ಸ್ಪಷ್ಟನೆ ಬೇಕಾಗಿದೆಯೆಂದು ಪಾಕ್ ಸೇನೆ ಹೇಳಿದೆ. ಯುಎಇ ಭೇಟಿಯಲ್ಲಿರುವ ಬಾಜ್ವಾ, ಹಿಂಸಾಚಾರದ ಹಿನ್ನೆಲೆಯಲ್ಲಿ ತನ್ನ ಪ್ರವಾಸವನ್ನು ಕಡಿತಗೊಳಿಸಿ, ಸ್ವದೇಶಕ್ಕೆ ವಾಪಸಾಗಿದ್ದಾರೆ. ಇದಕ್ಕೂ ಮೊದಲು ಅವರು ಪ್ರಧಾನಿ ಅಬ್ಬಾಸಿಯವರಿಗೆ ದೂರವಾಣಿ ಕರೆ ಮಾಡಿ, ಎರಡೂ ಕಡೆಗಳು ಹಿಂಸಾಚಾರದಲ್ಲಿ ತೊಡಗುವುದು ರಾಷ್ಟ್ರೀಯ ಹಿತದೃಷ್ಟಿಯಿಂದ ಒಳ್ಳೆಯದಲ್ಲವೆಂದು ಹೇಳಿದ್ದಾರೆ.
ಈ ಮಧ್ಯೆ ಇಸ್ಲಾಮಾಬಾದ್ ಹಿಂಸಾಚಾರದ ಹಿನ್ನೆಲೆಯಲ್ಲಿ ಎಲ್ಲಾ ಸುದ್ದಿ ಚಾನೆಲ್‌ಗಳ ಪ್ರಸಾರವನ್ನು ಸರಕಾರವು ರವಿವಾರವೂ ನಿಷೇಧಿಸಿದೆ ಹಾಗೂ ಎಲ್ಲಾ ಸಾಮಾಜಿಕ ಜಾಲತಾಣಗಳ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಮಾಧ್ಯಮಗಳ ಪ್ರಸಾರಕ್ಕೆ ತಡೆಯೊಡ್ಡಿರುವ ಪಾಕ್ ಸರಕಾರದ ಕ್ರಮವನ್ನು ಪಾಕಿಸ್ತಾನ ಪ್ರಸಾರಕರ ಸಂಸ್ಥೆ (ಪಿಬಿಎ) ತೀವ್ರವಾಗಿ ಖಂಡಿಸಿದೆ.