×
Ad

ಪೋಪ್ ಫ್ರಾನ್ಸಿಸ್ ಮ್ಯಾನ್ಮಾರ್‌ಗೆ

Update: 2017-11-26 21:53 IST

ರೋಮ್,ನ.26: ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರು ಸೋಮವಾರ, ಮ್ಯಾನ್ಮಾರ್‌ಗೆ ಆಗಮಿಸಲಿದ್ದಾರೆ. ಜನಾಂಗೀಯ ಹಿಂಸಾಚಾರಕ್ಕೆ ತತ್ತರಿಸಿ ರೊಹಿಂಗ್ಯಾ ಮುಸ್ಲಿಮರು ತಾಯ್ನಾಡಿನಿಂದ ಪಲಾಯನಗೈದಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ಮಾನವೀಯ ಬಿಕ್ಕಟ್ಟಿಗೆ ಪರಿಹಾರವನ್ನು ಕಂಡುಕೊಳ್ಳಲು ಪೋಪ್ ತನ್ನ ಮ್ಯಾನ್ಮಾರ್ ಪ್ರವಾಸದ ವೇಳೆ ಪ್ರಯತ್ನಿಸುವ ನಿರೀಕ್ಷೆಯಿದೆ.

  ಬೌದ್ಧ ಬಹುಸಂಖ್ಯಾತ ರಾಷ್ಟ್ರವಾದ ಮ್ಯಾನ್ಮಾರ್‌ನಲ್ಲಿ ರೋಮನ್ ಕ್ಯಾಥೊಲಿಕರು ಒಟ್ಟು ಜನಸಂಖ್ಯೆಯ ಶೇ.1ರಷ್ಟು ಮಾತ್ರವೇ ಇದ್ದಾರೆ. ಈ ವರ್ಷದ ಮೇ ತಿಂಗಳಲ್ಲಿ ಮ್ಯಾನ್ಮಾರ್ ನಾಯಕಿ ಆಂಗ್‌ಸಾನ್ ಸೂ ಕಿ ಅವರು ವ್ಯಾಟಿಕನ್‌ನಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಪೋಪ್ ಅವರ ಮ್ಯಾನ್ಮಾರ್ ಭೇಟಿಯನ್ನು ನಿರ್ಧರಿಸಲಾಗಿತ್ತು.

 ಪೋಪ್ ಅವರು ‘ಸಂಧಾನ, ಕ್ಷಮಾದಾನ ಹಾಗೂ ಶಾಂತಿ’ಯ ಸಂದೇಶವನ್ನು ರವಾನಿಸುವ ಉದ್ದೇಶದೊಂದಿಗೆ ಆರು ದಿನಗಳ ವಿಶ್ವ ಪ್ರವಾಸವನ್ನು ಕೈಗೊಂಡಿದ್ದಾರೆಂದು ವ್ಯಾಟಿಕನ್ ಅಧಿಕಾರಿಗಳು ತಿಳಿಸಿದ್ದಾರೆ. ಬಡತನದಿಂದ ಪೀಡಿತವಾಗಿರುವ ಹಾಗೂ ರಾಜಕೀಯವಾಗಿ ಅಸ್ಥಿರವಾದ ಪರಿಸ್ಥಿತಿಯಿರುವ ರಾಷ್ಟ್ರಗಳನ್ನು ಕೇಂದ್ರೀಕರಿಸಿ ಪೋಪ್ ಈ ಪ್ರವಾಸವನ್ನು ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.

ಮ್ಯಾನ್ಮಾರ್‌ನಲ್ಲಿ ಕಳೆದ ಆಗಸ್ಟ್‌ನಲ್ಲಿ ಸೇನೆ ಹಾಗೂ ಬೌದ್ಧ ಉಗ್ರವಾದಿ ಗುಂಪುಗಳ ಹಿಂಸಾಚಾರದಿಂದ ತತ್ತರಿಸಿದ 60 ಸಾವಿರಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮರು ನೆರೆಯ ರಾಷ್ಟ್ರವಾದ ಬಾಂಗ್ಲಾಕ್ಕೆ ಪಲಾಯನಗೈದಿದ್ದಾರೆ. ಮ್ಯಾನ್ಮಾರ್ ಪ್ರವಾಸದ ಬಳಿಕ ಪೋಪ್ ಅವರು ಬಾಂಗ್ಲಾದೇಶಕ್ಕೂ ಭೇಟಿ ನೀಡಲಿದ್ದಾರೆ.

 ಯುರೋಪ್‌ನಲ್ಲಿ ನಿರಾಶ್ರಿತರ ಪರವಾಗಿ ಧ್ವನಿಯೆತ್ತಿರುವ ಪೋಪ್ ಅವರಿಗೆ ಮ್ಯಾನ್ಮಾರ್‌ನಲ್ಲಿ ಭುಗಿಲೆದ್ದಿರುವ ಮಾನವೀಯ ಬಿಕ್ಕಟ್ಟಿಗೂ ಸೂಕ್ತ ಪರಿಹಾರವನ್ನು ಕಂಡುಹಿಡಿಯುವರೆಂಬ ನಿರೀಕ್ಷೆ ಅಂತಾರಾಷ್ಟ್ರೀಯ ವಲಯಗಳಲ್ಲಿ ವ್ಯಕ್ತವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News