×
Ad

'ಬಸವಣ್ಣನ ನಿಜವಾದ ಭಕ್ತರಾದರೆ ಸಿದ್ದರಾಮಯ್ಯ ಗೋಹತ್ಯೆ ನಿಷೇಧಿಸಲಿ'

Update: 2017-11-26 22:04 IST

ಉಡುಪಿ, ನ. 26: ಮುಖ್ಯಮಂತ್ರಿ ಸಿದ್ದರಾಮಯ್ಯ ಬಸವಣ್ಣರ ನಿಜವಾದ ಭಕ್ತರಾಗಿದ್ದರೆ ತಮ್ಮ ಅಧಿಕಾರ ಅವಧಿಯಲ್ಲಿ ಈ ಹಿಂದೆ ಹಿಂಪಡೆದ ಗೋಹತ್ಯೆ ನಿಷೇಧ ಮಸೂದೆಯನ್ನು ಮತ್ತೆ ರಾಜ್ಯದಲ್ಲಿ ಜಾರಿಗೆ ತರಬೇಕು. ಆಗ ಅವರನ್ನು ನಾವು ಬಸವಣ್ಣನ ಭಕ್ತರು ಎಂಬುದಾಗಿ ಒಪ್ಪಬಹುದು ಎಂದು ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ವಿಶ್ವ ಹಿಂದೂ ಪರಿಷತ್‌ನ ಧರ್ಮ ಸಂಸದ್ ಪ್ರಯುಕ್ತ ಉಡುಪಿ ಎಂಜಿಎಂ ಕಾಲೇಜಿನ ಮೈದಾನದಲ್ಲಿ ಇಂದು ಹಮ್ಮಿಕೊಳ್ಳಲಾದ ಹಿಂದೂ ಸಮಾಜೋತ್ಸವ ದಲ್ಲಿ ಅವರು ಆಶೀರ್ವಚನ ನೀಡಿದರು.

ಬಸವಣ್ಣ ತನ್ನ ವಚನದಲ್ಲಿ ಗೋಹತ್ಯೆ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಸ್ಪಷ್ಟವಾಗಿ ಹೇಳಿದ್ದಾರೆ. ಬಸವಣ್ಣರ ಭಕ್ತರು ಹಾಗೂ ಅವರ ಮಾರ್ಗ ದಲ್ಲಿಯೇ ನಡೆಯುತ್ತೇನೆ ಎಂದು ಹೇಳುವ ಮುಖ್ಯಮಂತ್ರಿ ಬಸವಣ್ಣನಿಗೆ ಅತ್ಯಂತ ಇಷ್ಟವಾದ ಗೋಹತ್ಯೆ ನಿಷೇಧ ವಾಪಾಸ್ ಪಡೆದಿರುವುದು ಯಾಕೆ ಎಂದು ಪ್ರಶ್ನಿಸಿದ ಸ್ವಾಮೀಜಿ, ಆದುದರಿಂದ ಮುಖ್ಯಮಂತ್ರಿ ತಮ್ಮ ವಿಚಾರವನ್ನು ಬದಲಾಯಿಸಿಕೊಂಡು ಗೋಹತ್ಯೆ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸುವ ಮಸೂದೆಯನ್ನು ರಾಜ್ಯದಲ್ಲಿ ಶೀಘ್ರವೇ ಜಾರಿಗೆ ತರಲಿ ಎಂದರು.

ರಾಮ ಮಂದಿರ ನಿರ್ಮಾಣ ಆಗದೆ ನಮಗೆ ವಿಶ್ರಾಂತಿ ಇಲ್ಲ ಎಂದು ನಮ್ಮ ಯುವಕರು ಪ್ರತಿಜ್ಞೆ ಮಾಡಬೇಕು. ರಾಮ ಮಂದಿರ ಚಳವಳಿಯನ್ನು ಮುಂದುವರಿಸಬೇಕು. ಒಂದು ವರ್ಷದೊಳಗೆ ರಾಮ ಮಂದಿರ ನಿರ್ಮಾಣದ ಕಾರ್ಯ ಆರಂಭವಾಗಲಿ ಎಂದು ಅವರು ತಿಳಿಸಿದರು.

ಮಸೀದಿಗಳಿಗೆ ನೀಡುವ ಸ್ವಾಯತ್ತತೆಯನ್ನು ದೇವಸ್ಥಾನಗಳಿಗೆ ಸರಕಾರ ನೀಡಬೇಕು. ಅಲ್ಲಿಯೂ ಯಾವುದೇ ವ್ಯತ್ಯಾಸ ಇರಬಾರದು. ಬಹುಸಂಖ್ಯಾತರಿಗೆ ಸೌಲಭ್ಯ ನೀಡುವುದರಿಂದ ಅಲ್ಪಸಂಖ್ಯಾತರಿಗೆ ಯಾವುದೇ ಅನ್ಯಾಯ ಆಗಲ್ಲ. ನಾನು ಮೀಸಲಾತಿ, ದಲಿತ ವಿರೋಧಿ ಅಲ್ಲ ಎಂದು ಅವರು ಸ್ಪಷ್ಪಪಡಿಸಿದರು.

ವಿಎಚ್‌ಪಿ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಮಾತನಾಡಿ, ನಾವು ಎಂಪಿ, ಎಂಎಲ್‌ಎ, ಮಂತ್ರಿಗಿರಿಯನ್ನು ಕೇಳುವುದಿಲ್ಲ. ನಮಗೆ ಅಯೋಧ್ಯೆಯ ರಾಮ ಜನ್ಮ ಭೂಮಿಯಲ್ಲಿ ರಾಮ ಮಂದಿರವನ್ನು ನಿರ್ಮಿಸಬೇಕು. ನಾವೆಲ್ಲ ಮನೆಗಳಲ್ಲಿ ವಾಸಿಸುತ್ತಿದ್ದರೆ ರಾಮ ಮಾತ್ರ ಅಯೋಧ್ಯೆಯಲ್ಲಿ ಜೋಪಡಿಯಲ್ಲಿದ್ದಾನೆ. ಇದರಿಂದ ನಮಗೆ ನಾಚಿಕೆಯಾಗಬೇಕು ಎಂದು ಹೇಳಿದರು.

ಅಯೋಧ್ಯೆಯಲ್ಲಿ ನಾವು ರಾಮಮಂದಿರ ನಿರ್ಮಿಸುತ್ತೇವೆ. ಆ ವ್ಯಾಪ್ತಿಯಲ್ಲಿ ಎಲ್ಲಿಯೂ ಮಸೀದಿ ನಿರ್ಮಿಸಲು ಬಿಡಲ್ಲ. ದೇಶದ ಎಲ್ಲೂ ಬಾಬರ್ ಹೆಸರಿನಲ್ಲಿ ಮಸೀದಿ ನಿರ್ಮಿಸಲು ನಾವು ಅವಕಾಶ ನೀಡುವುದಿಲ್ಲ. ನಮಗೆ ರಾಮ ಮಂದಿರ ಬೇಕು ಹಾಗೂ ದೇಶದಲ್ಲಿ ರಾಮ ರಾಜ್ಯ ಕೂಡ ನಿರ್ಮಾಣ ಆಗ ಬೇಕು ಎಂದು ಅವರು ತಿಳಿಸಿದರು.

ಮಾದರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ಈ ವೇದಿಕೆಯಲ್ಲಿ ತೆಗೆದು ಕೊಂಡ ನಿರ್ಣಯಗಳನ್ನು ಟೀಕೆ ಮಾಡುವ ಮತ್ತೊಂದು ವೇದಿಕೆ ರಾಜ್ಯದಲ್ಲಿ ನಡೆಯುತ್ತಿದೆ. ಈ ವೇದಿಕೆಗೆ ಬಂದ ಕಾರಣ ನಾನು ಪೀಠ ಬಿಡುವಂತಹ ಮಾತುಗಳು ಕೂಡ ನಾಳೆ ಬರಬಹುದು. ಆದರೆ ನನಗೆ ಮಠ ಪೀಠ ಮುಖ್ಯ ಅಲ್ಲ. ಈ ದೇಶದ ಸಾಮರಸ್ಯ ಮುಖ್ಯ ಎಂದರು.

ದಲಿತರು ದೇವಸ್ಥಾನ ಪ್ರವೇಶಿಸಿದರೆ ಸಂಘರ್ಷ ಉಂಟು ಮಾಡುವ ಈ ಸಂದರ್ಭದಲ್ಲಿ ಅನ್ಯ ಧರ್ಮಕ್ಕೆ ಮತಾಂತರಗೊಂಡವರನ್ನು ವಾಪಾಸ್ ತರುವುದ ಕ್ಕಿಂತ ಅವರು ಅನ್ಯ ಧರ್ಮಕ್ಕೆ ಹೋಗದಂತ ಸಂದರ್ಭವನ್ನು ಸೃಷ್ಠಿ ಮಾಡುವುದು ಮುಖ್ಯವಾಗಿದೆ. ಯಾರು ಕೂಡ ಅನ್ಯ ಧರ್ಮಕ್ಕೆ ಹೋಗದಂತೆ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಈ ದೇಶದಲ್ಲಿ ಮತಾಂತರ ಎಂಬುದು ನಡೆಯಲು ಸಾಧ್ಯವೇ ಇಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.

ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಸ್ವಾಮೀಜಿ, ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಆನೆಗುಂದಿ ಸಂಸ್ಥಾನದ ಶ್ರೀಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ಕೇಮಾರು ಸ್ವಾಮೀಜಿ, ವಜ್ರದೇಹಿ ಸ್ವಾಮೀಜಿ ಮಾಣಿಲ ಸ್ವಾಮೀಜಿ, ಒಡಿಯೂರು ಸ್ವಾಮೀಜಿ ಮೊದಲಾದ ಸಂತರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಧರ್ಮಸಂಸದ್ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಡಾ. ವೀರೇಂದ್ರ ಹೆಗ್ಗಡೆ, ವಿಎಚ್‌ಪಿ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ಜಿ. ಮಾತನಾಡಿದರು. ವಿಎಚ್‌ಪಿ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್ ಸ್ವಾಗತಿಸಿದರು. ವಿಲಾಸ್ ನಾಯಕ್ ವಂದಿಸಿದರು. ಇದಕ್ಕೂ ಮುನ್ನ ಜೋಡುಕಟ್ಟೆಯಿಂದ ಎಂಜಿಎಂ ಮೈದಾನದವರೆಗೆ ಶೋಭಾಯಾತ್ರೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News