ಸಂವಿಧಾನದ ಆಶಯಗಳಿಗೆ ಬದ್ಧರಾಗೋಣ- ಅಶ್ರಫ್ ಬರ್ಮಾವರ್
ಭಟ್ಕಳ, ನ. 26: ಭಾರತೀಯರೆಂಬ ನೆಲೆಯಲ್ಲಿ ಈ ದೇಶದ ಎಲ್ಲ ಪ್ರಜೆಗಳು ಸಂವಿಧಾನದ ಆಶಯಗಳಿಗೆ ಬದ್ಧರಾಗಿರಬೇಕೆಂದು ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಶಮ್ಸ್ ಸ್ಕೂಲ್ ಬೋರ್ಡ್ ಉಪಾಧ್ಯಕ್ಷ ಸೈಯದ್ ಅಶ್ರಫ್ ಬರ್ಮಾವರ್ ಹೇಳಿದರು.
ಅವರು ರವಿವಾರ ಶಾಲಾ ಸಭಾಂಗಣದಲ್ಲಿ ಜರಗಿದ ’ಸಂವಿಧಾನ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಸಂವಿಧಾನ ಎಂಬ ಹೆಗ್ಗಳಿಗೆ ಪಾತ್ರರಾಗಿರುವ ನಮ್ಮ ದೇಶದ ಸಂವಿಧಾನ ಎಲ್ಲರಿಗೂ ಬದುಕುವ ಹಕ್ಕು, ಶಿಕ್ಷಣದ ಹಕ್ಕನ್ನು ನೀಡಿದೆ. ಸಂವಿಧಾನದ ಆಶಯದಂತೆ ಪ್ರತಿಯೊಬ್ಬರು ಜೀವಿಸಿದ್ದೇ ಆದಲ್ಲಿ ಈ ದೇಶದಲ್ಲಿ ಯಾವುದೇ ಗಲಭೆ ಗೊಂದಲಗಳು ನಡೆಯುವುದಿಲ್ಲ, ಕೆಲವು ಸಂವಿಧಾನದ ವಿರೋಧಿಗಳಿಂದಾಗಿಯೇ ಇಂದು ದೇಶದಲ್ಲಿ ಕ್ಷೋಭೆಯುಂಟಾಗುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸಂಸ್ಥೆಯ ಕಾರ್ಯದರ್ಶಿ ತಲ್ಹಾ ಸಿದ್ದಿ ಬಾಪ ಮಾತನಾಡಿ, ನಾವು ನಮ್ಮ ಹಕ್ಕುಗಳನ್ನು ಮಾತ್ರ ತಿಳಿದುಕೊಂಡರೆ ಸಾಲದು, ನಮ್ಮ ಕರ್ತವ್ಯಗಳೇನು ಎನ್ನುವುದನ್ನು ತಿಳಿದುಕೊಳ್ಳಬೇಕಾಗಿದೆ. ಈ ದೇಶದ ಪ್ರಜೆಗಳಿಗೆ ದೇಶದ ಸಂವಿಧಾನ ಸಮಾನತೆಯ ಹಕ್ಕನ್ನು ನೀಡಿದೆ. ಯಾವುದೇ ಜಾತಿ ಧರ್ಮ ಎಂಬ ಬೇಧವನ್ನು ಮಾಡದೆ ಎಲ್ಲರೂ ಸಮಾನರು ಎಂಬ ಸಂದೇಶ ನೀಡಿದೆ. ಈ ನಿಟ್ಟಿನಲ್ಲಿ ನಾವು ನಮ್ಮ ಕರ್ತವ್ಯಗಳನ್ನು ಸರಿಯಾದ ನಿಟ್ಟಿನಲ್ಲಿ ಪಾಲಿಸಕೊಂಡು ಬರಬೇಕು ಎಂದರು.
ಸಮಾಜ ವಿಜ್ಞಾನದ ಉಪನ್ಯಾಸಕಿ ಪೂರ್ಣಿಮಾ ಹೆಗಡೆ ಮಾತನಾಡಿ, ಬಾಬಾ ಸಾಹೇಬರ ನೆತೃತ್ವದಲ್ಲಿ ರಚಿತಗೊಂಡ ಸಂವಿಧಾನ ಜಗತ್ತಿನ ಅನೇಕ ಸಂವಿಧಾನಗಳನ್ನು ಮಾದರಿಯನ್ನಾಗಿ ಅಳವಡಿಸಿಕೊಂಡಿದ್ದು ಇಂತಹ ಬೃಹತ್ ಲಿಖಿತ ಸಂವಿಧಾನ ಬೇರೆಲ್ಲೋ ಕಾಣಲು ಸಿಗುವುದಿಲ್ಲ ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಂ.ಆರ್.ಮಾನ್ವಿ, ಸಂವಿಧಾನದ ರೂಪುರೇಶೆಗಳನ್ನು ವಿವರಿಸಿದರು.
ಮುಹಮ್ಮದ್ ಬಿಲಾಲ್ ಕಾರ್ಯಕ್ರಮ ನಿರೂಪಿಸಿರು. ಶಿಕ್ಷಕ ಶಾಝಿರ್ ಹುಸೇನ್ ವಂದಿಸಿದರು. ಅಬ್ದುಲ್ಲಾ ರಬಿ ಖಲಿಫಾ, ಅಬ್ದುಸ್ಸುಭಾನ್ ನದ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.