ಅಕ್ರಮ ಬಂಧನದಲ್ಲಿದ್ದ ನನಗೆ ಸ್ವಾತಂತ್ರ್ಯ ಬೇಕು, ಪತಿಯನ್ನು ಭೇಟಿಯಾಗಬೇಕು
ಹೊಸದಿಲ್ಲಿ, ನ.27: “ಹನ್ನೊಂದು ತಿಂಗಳುಗಳ ಕಾಲ ನಾನು ಅಕ್ರಮ ಬಂಧನದಲ್ಲಿದ್ದೆ. ನಾನು ಉತ್ತಮ ನಾಗರಿಕಳಾಗಲು, ಉತ್ತಮ ವೈದ್ಯೆಯಾಗಲು ಬಯಸುತ್ತೇನೆ. ನನಗೆ ಸ್ವಾತಂತ್ರ್ಯ ಬೇಕು” ಎಂದು ಹಾದಿಯಾ ಸುಪ್ರೀಂಕೋರ್ಟ್ ಗೆ ಹೇಳಿದ್ದಾರೆ.
ಸಾಕಷ್ಟು ಕುತೂಹಲ ಸೃಷ್ಟಿಸಿದ್ದ ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನ ನ್ಯಾಯಮರ್ತಿಗಳಾದ ದೀಪಕ್ ಮಿಶ್ರಾ, ಡಿವೈ ಚಂದ್ರಚೂಡ್ ಮತ್ತು ಎ.ಎಂ.ಖಾನ್ವಿಲ್ಕರ್ ನೇತೃತ್ವದ ಮೂವರು ಸದಸ್ಯರ ಪೀಠ ನಡೆಸಿತು. ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಜನವರಿ ಮೂರನೆ ವಾರಕ್ಕೆ ಮುಂದೂಡಿದೆ.
“ನಾನು ನನ್ನ ಪತಿಯನ್ನು ಭೇಟಿಯಾಗಲು ಬಯಸುತ್ತೇನೆ. ನನ್ನ ಶಿಕ್ಷಣವನ್ನು ಪೂರ್ತಿಗೊಳಿಸಲು ಬಯಸುತ್ತೇನೆ ಹಾಗು ನನ್ನ ನಂಬಿಕೆಯ ಪ್ರಕಾರ ಬದುಕಲು ಬಯಸುತ್ತೇನೆ. ನನ್ನ ಪತಿಯ ಸಹಾಯದೊಂದಿಗೆ ನಾನು ಶಿಕ್ಷಣವನ್ನು ಮುಂದುವರಿಸಲು ಬಯಸುತ್ತೇನೆ. ಆದರೆ ರಾಜ್ಯ ಸರಕಾರ ಶಿಕ್ಷಣದ ಖರ್ಚನ್ನು ಭರಿಸಬೇಕಾಗಿಲ್ಲ. ನನ್ನ ಪತಿ ಈ ಖರ್ಚುಗಳನ್ನು ಭರಿಸುತ್ತಾರೆ” ಎಂದು ಹಾದಿಯಾ ಹೇಳಿದರು.
ಇತರ ವಿದ್ಯಾರ್ಥಿಗಳಂತೆ ಹಾದಿಯಾಳನ್ನು ನೋಡಿಕೊಳ್ಳಬೇಕು ಎಂದು ಕೋರ್ಟ್ ಕಾಲೇಜು ಆಡಳಿತಕ್ಕೆ ಆದೇಶ ನೀಡಿದೆ. ಹಾದಿಯಾ ಶಿಕ್ಷಣ ಮುಗಿಯುವವರೆಗೆ ಮುಂದಿನ 11 ತಿಂಗಳುಗಳ ಕಾಲ ಹಾದಿಯಾಗೆ ಭದ್ರತೆ ಒದಗಿಸುವಂತೆ ಸುಪ್ರೀಂ ಕೋರ್ಟ್ ತಮಿಳುನಾಡಿಗೆ ಆದೇಶಿಸಿದೆ.