ರಾಮ ಮಂದಿರ ನಿರ್ಮಾಣ: ಪೂರಕ ವಾತಾವರಣ ಸೃಷ್ಟಿಸಲು ವಿಹಿಂಪದಿಂದ ರಥ ಯಾತ್ರಾ ಯೋಜನೆ

Update: 2017-11-27 13:07 GMT

ಪಾಟ್ನಾ,ನ.27: 32 ವರ್ಷಗಳ ಅಂತರದ ಬಳಿಕ ಇತ್ತೀಚಿಗೆ ಉಡುಪಿಯಲ್ಲಿ ನಡೆದ ಧರ್ಮಸಂಸದ್‌ನಲ್ಲಿ ರಾಮ ಮಂದಿರ ನಿರ್ಮಾಣ ಕುರಿತು ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ಅವರ ಹೇಳಿಕೆಯಿಂದ ಉತ್ತೇಜಿತಗೊಂಡಿರುವ ವಿಹಿಂಪ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಪೂರಕ ವಾತಾವರಣವನ್ನು ಸೃಷ್ಟಿಸಲು ನಿರ್ಧರಿಸಿದೆ.

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಹಿಂಪ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು, ಅಯೋಧ್ಯೆಯಲ್ಲಿ ಪ್ರಸಕ್ತ ರಾಮ ಲಲ್ಲಾನ ಮೂರ್ತಿಗಳಿರುವ ಸ್ಥಳದಲ್ಲಿಯೇ ಭವ್ಯ ಮಂದಿರ ನಿರ್ಮಾಣಗೊಳ್ಳಬೇಕೆಂದು ದೇಶಾದ್ಯಂತದ ಸಂತರು ಸರ್ವಾನುಮತದಿಂದ ಒಪ್ಪಿಕೊಂಡಿದ್ದಾರೆ. ಶ್ರೀರಾಮ ಈಗಾಗಲೇ ಅಲ್ಲಿದ್ದಾನೆ ಮತ್ತು ಭವ್ಯಮಂದಿರ ನಿರ್ಮಾಣವಾಗುವುದು ಕೇವಲ ಕಾಲದ ಪ್ರಶ್ನೆಯಾಗಿದೆ ಅಷ್ಟೇ ಎಂದು ಹೇಳಿದರು.ಭಕ್ತರೆಲ್ಲರೂ ಶ್ರೀರಾಮನ ಹೆಸರನ್ನು ಬಹಿರಂಗವಾಗಿ ಪಠಿಸುವಂತೆ ಮಾಡಲು ಮತ್ತು ದೇವಾಲಯಗಳಲ್ಲಿ ಆರತಿಗಳನ್ನು ನಡೆಸಲು ಮಾ.18ರಿಂದ ಮಾ.31ರವರೆಗೆ ವಿಹಿಂಪ ಕಾರ್ಯಕರ್ತರು ತೊಡಗಿಕೊಳ್ಳಲಿದ್ದು, ಈ ಅವಧಿಯಲ್ಲಿ ಮಂದಿರ ನಿರ್ಮಾಣಕ್ಕೆ ಪೂರಕ ವಾತಾವರಣವನ್ನು ಸೃಷ್ಟಿಸುವ ಸಾಧ್ಯತೆಯಿದೆ. ಇದೇ ವೇಳೆ ಜನರು ರಾಮ ಮಂದಿರ ನಿರ್ಮಾಣಕ್ಕೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸುವಂತೆ ಮಾಡಲು ಗ್ರಾಮಗಳಲ್ಲಿ ಸಭೆಗಳನ್ನು ನಡೆಸಲು ವಿಹಿಂಪ ನಾಯಕರು ಯೋಜಿಸಿದ್ದಾರೆ.

 ರಾಮ ಮಂದಿರ ಚಳವಳಿಗೆ ಪುನಃಶ್ಚೇತನ ನೀಡಲು ಅಯೋಧ್ಯೆಯಿಂದ ರಾಮೇಶ್ವರದವರೆಗೆ ರಥಯಾತ್ರೆಯೊಂದನ್ನು ಹಮ್ಮಿಕೊಳ್ಳಲು ವಿಹಿಂಪನೊಂದಿಗೆ ಗುರುತಿಸಿಕೊಂಡಿರುವ ಕೇರಳದ ಕೃಷ್ಣಾನಂದ ಸರಸ್ವತಿಯವರಂತಹ ಸಂತರು ಚಿಂತನೆ ನಡೆಸುತ್ತಿದ್ದಾರೆ.

‘ರಾಮರಾಜ್ಯ ರಥ ಯಾತ್ರೆ’ಯು ಅಯೋಧ್ಯೆಯಿಂದ ಆರಂಭಗೊಳ್ಳಲಿದೆ ಮತ್ತು 14 ತಿಂಗಳುಗಳ ಬಳಿಕ ಮರಳಲಿದೆ ಎಂದು ಸರಸ್ವತಿ ಉಡುಪಿಯಿಂದ ದೂರವಾಣಿ ಮೂಲಕ ಸುದ್ದಿಸಂಸ್ಥೆಗೆ ತಿಳಿಸಿದರು.

ಮಂದಿರ ನಿರ್ಮಾಣಕ್ಕಾಗಿ ಪ್ರಸ್ತಾವಿತ ನೀಲನಕ್ಷೆಯನ್ನು ಹಿಂದು ಕುಟುಂಬಗಳಿಗೆ ತಲುಪಿಸುವುದೂ ಈ ಯೋಜನೆಯ ಭಾಗವಾಗಿದೆ. ಇದು ಮಂದಿರ ನಿರ್ಮಾಣ ಮತ್ತು ಹಿಂದು ಸಮುದಾಯವನ್ನು ಇನ್ನಷ್ಟು ಗಾಢವಾಗಿ ಬೆಸೆಯಲು ಮತ್ತು ಹಿಂದುಗಳನ್ನು ಒಗ್ಗಟ್ಟಾಗಿಸಲು ನೆರವಾಗುತ್ತದೆ ಎಂದು ವಿಹಿಂಪ ಆಶಯ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News