ಆಧಾರ್ ಜೋಡಣೆ ಅಂತಿಮ ದಿನಾಂಕ ವಿಸ್ತರಣೆಗೆ ಸಿದ್ಧ: ಕೇಂದ್ರ ಸರಕಾರ
ಹೊಸದಿಲ್ಲಿ, ನ.27: ಸರಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಆಧಾರ್ ಸಂಖ್ಯೆ ಜೋಡಣೆಗೆ ಅಂತಿಮ ದಿನಾಂಕವನ್ನು 2018ರ ಮಾರ್ಚ್ 31ರವರೆಗೆ ವಿಸ್ತರಿಸಲು ಬಯಸಿರುವುದಾಗಿ ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಈಗಆಧಾರ್ ಸಂಖ್ಯೆ ಜೋಡಿಸಲು ಡಿ.31 ಅಂತಿಮ ದಿನಾಂಕವಾಗಿದೆ.
ಸಮಾಜಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯಲು ಆಧಾರ್ ಕಡ್ಡಾಯಗೊಳಿಸಿರುವ ಸರಕಾರದ ನಿರ್ಧಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಬೇಕೆಂದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ನ್ಯಾಯಪೀಠವು, ಈ ವಿಷಯದಲ್ಲಿ ಸಂವಿಧಾನ ಪೀಠ ಮಾತ್ರ ಮಧ್ಯಂತರ ಆದೇಶ ಹೊರಡಿಸಬಹುದು. ಆದ್ದರಿಂದ ಆಧಾರ್ ಜೋಡಣೆ ಕಡ್ಡಾಯದ ಆದೇಶಕ್ಕೆ ತಡೆಯಾಜ್ಞೆ ನೀಡುವ ಉದ್ದೇಶದಿಂದ ಸಂವಿಧಾನ ಪೀಠವೊಂದನ್ನು ರಚಿಸುವ ಬಗ್ಗೆ ಮುಂದಿನ ವಾರ ನಿರ್ಧರಿಸಲಾಗುವುದು ಎಂದು ತಿಳಿಸಿದೆ.
ನ್ಯಾಯಮೂರ್ತಿ ಶ್ರೀಕೃಷ್ಣ ಆಯೋಗವು ದತ್ತಾಂಶ ಸುರಕ್ಷತೆ ಬಗ್ಗೆ ಶ್ವೇತಪತ್ರ ಹೊರಡಿಸಿದ್ದು, ಇದರಲ್ಲಿ ಕೆಲವು ಸಲಹೆಗಳಿರಬಹುದು. ಇದನ್ನು ಪರಿಶೀಲಿಸಲು ಸಮಯಾವಕಾಶದ ಅಗತ್ಯವಿದೆ. ಆದ್ದರಿಂದ ಪ್ರಕರಣದ ವಿಚಾರಣೆಯನ್ನು ಮುಂದಿನ ವರ್ಷದ ಫೆಬ್ರವರಿಗೆ ನಿಗದಿಗೊಳಿಸುವಂತೆ ಸರಕಾರವನ್ನು ಪ್ರತಿನಿಧಿಸಿದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಕೋರಿದರು.
ಈ ಸಂದರ್ಭ ಮಾತನಾಡಿದ ಅರ್ಜಿದಾರರ ಪರ ವಕೀಲ ಶ್ಯಾಮ್ ದಿವಾನ್, ಫೆಬ್ರವರಿಯವರೆಗೆ ಸಮಯಾವಕಾಶ ನೀಡುವ ಬಗ್ಗೆ ತಮ್ಮದೇನೂ ಅಭ್ಯಂತರವಿಲ್ಲ. ಆದರೆ ಅದುವರೆಗೆ ಆಧಾರ್ ಕಡ್ಡಾಯಗೊಳಿಸುವ ನಿರ್ಧಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಬೇಕು ಎಂದು ನ್ಯಾಯಾಲಯವನ್ನು ಒತ್ತಾಯಿಸಿದರು.
ಸಂವಿಧಾನ ಪೀಠವು ದಿಲ್ಲಿ-ಕೇಂದ್ರ ಸರಕಾರ ಪ್ರಕರಣದಲ್ಲಿ ಆಧಾರ್ ಜೋಡಣೆ ಕುರಿತ ವಿಚಾರಣೆ ನಡೆಸುತ್ತಿದ್ದು ವಿಚಾರಣೆ ಪೂರ್ಣಗೊಂಡ ಬಳಿಕ ಆಧಾರ್ ಜೋಡಣೆ ಕುರಿತ ಅರ್ಜಿಯ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿತು. ಪ್ರಸಕ್ತ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆಗೆ ಈ ವರ್ಷದ ಡಿಸೆಂಬರ್ 31 ಅಂತಿಮ ದಿನವಾಗಿದ್ದರೆ, ಮೊಬೈಲ್ ನಂಬರ್‌ಗೆ ಆಧಾರ್ ಜೋಡಣೆಗೆ 2018ರ ಫೆಬ್ರವರಿ 6 ಅಂತಿಮ ದಿನವಾಗಿದೆ.