×
Ad

ಕಾಶ್ಮೀರದಲ್ಲಿ ಭಯೋತ್ಪಾದನೆ ತಗ್ಗಿದೆಯೆಂಬ ಸರಕಾರದ ಹೇಳಿಕೆಯನ್ನು ಪ್ರಶ್ನಿಸಿದ ಶಿವಸೇನೆ

Update: 2017-11-27 18:59 IST

ಮುಂಬೈ,ನ,.27: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಕಡಿಮೆಯಾಗಿವೆ ಎಂಬ ಸರಕಾರದ ಹೇಳಿಕೆಯನ್ನು ಸೋಮವಾರ ಪ್ರಶ್ನಿಸಿರುವ ಶಿವಸೇನೆಯು, ಭಯೋತ್ಪಾದಕರೀಗ ಕಣಿವೆಯಲ್ಲಿನ ಯುವಜನರಲ್ಲಿ ಭೀತಿಯನ್ನು ಹುಟ್ಟಿಸಲು ಯೋಧರನ್ನು ಕೊಲ್ಲುತ್ತಿದ್ದಾರೆ ಎಂದು ಹೇಳಿದೆ.

ಪ್ರಾದೇಶಿಕ ಸೇನೆಯ ಯೋಧ ಇರ್ಫಾನ್ ಅಹ್ಮದ್ ಅವರ ಹತ್ಯೆಯನ್ನು ಪ್ರಸ್ತಾಪಿಸಿರುವ ಅದು, ಇದು ಕಾಶ್ಮೀರಿ ಯುವಕರ ನೈತಿಕ ಸ್ಥೈರ್ಯವನ್ನು ಉಡುಗಿಸುವ ಮತ್ತು ಅವರಲ್ಲಿ ಭೀತಿಯನ್ನು ಸೃಷ್ಟಿಸುವ ‘ನೂತನ ತಂತ್ರ’ವಾಗಿದೆ ಎಂದು ಬಣ್ಣಿಸಿದೆ.

ಯೋಧರ ಬರ್ಬರ ಹತ್ಯೆಗಳ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಆರೋಪಿಸಿರುವ ಶಿವಸೇನೆಯು, ಇದೆಲ್ಲವೂ ಪಾಕಿಸ್ತಾನಿಗಳ ‘ಮನ್ ಕಿ ಬಾತ್’ ಆಗಿದೆ. ಪ್ರತಿ ತಿಂಗಳು ರೇಡಿಯೊದಲ್ಲಿ ತನ್ನ ‘ಮನ್ ಕಿ ಬಾತ್’ ಹೇಳಿಕೊಳ್ಳುವ ವ್ಯಕ್ತಿಗೆ ಇದು ಅರ್ಥವಾಗುತ್ತದೆಯೇ ಎಂದು ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ಆಕಾಶವಾಣಿ ಕಾರ್ಯಕ್ರಮವನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ಪ್ರಶ್ನಿಸಿದೆ.

 ಮುಂಬೈ ದಾಳಿಯ ರೂವಾರಿ ಹಫೀಝ್ ಸಯೀದ್‌ನನ್ನು ಪಾಕಿಸ್ತಾನದಲ್ಲಿ ಬಂಧನ ಮುಕ್ತಗೊಳಿಸಿರುವುದು ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಮರುಜೀವ ನೀಡಬಹುದು ಎಂದೂ ಶಿವಸೇನೆಯ ಮುಖವಾಣಿ ‘ಸಾಮನಾ’ದ ಸೋಮವಾರದ ಸಂಚಿಕೆಯ ಸಂಪಾದಕೀಯ ಲೇಖನವು ಹೇಳಿದೆ.

ಇರ್ಫಾನ್ ಅಹ್ಮದ್‌ರನ್ನು ಅಪಹರಿಸಿದ್ದ ಭಯೋತ್ಪಾದಕರು ಬಳಿಕ ಅವರನ್ನು ಗುಂಡಿಟ್ಟು ಹತ್ಯೆಗೈದಿದ್ದರು. ಅವರ ಶವ ರವಿವಾರ ದ.ಕಾಶ್ಮೀರದ ಶೋಪಿಯಾನ ಜಿಲ್ಲೆಯ ವಾಟಮುಲ್ಲಾ ಕೀಗಮ್ ಪ್ರದೇಶದಲ್ಲಿ ಪತ್ತೆಯಾಗಿತ್ತು.

ಅಹ್ಮದ್ ಹತ್ಯೆಯು ಸೇನೆ ಅಥವಾ ಅರೆ ಸೇನಾಪಡೆಗಳನ್ನು ಸೇರಿರುವ ಕಾಶ್ಮೀರಿಗಳನ್ನು ಕೊಲ್ಲಲು ಭಯೋತ್ಪಾದಕ ಸಂಘಟನೆಗಳು ಅಳವಡಿಸಿಕೊಂಡಿರುವ ನೂತನ ತಂತ್ರದ ಭಾಗವಾಗಿದೆ ಎಂದು ಶಿವಸೇನೆಯು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News