×
Ad

ಹತ್ತು ತಿಂಗಳಲ್ಲೇ ಕುರ್‌ಆನ್ ಕಂಠಪಾಠ ಮಾಡಿದ ಮುಹಮ್ಮದ್ ಮುಝಮ್ಮಿಲ್

Update: 2017-11-27 19:53 IST

ಮಂಗಳೂರು, ನ.27: ದ.ಕ. ಜಿಲ್ಲಾ ಸುನ್ನಿ ಸೆಂಟರ್‌ನ ಅಧೀನದಲ್ಲಿರುವ ಮೂಳೂರಿನ ಮರ್ಕಝ್ ತಹ್‌ಲೀಮಿಲ್ ಇಹ್ಸಾನ್‌ನ ವಿದ್ಯಾರ್ಥಿ ಮುಹಮ್ಮದ್ ಮುಝಮ್ಮಿಲ್ (12) ಹಿಫ್ಲುಳ್ ಕುರ್‌ಆನ್ ವಿಭಾಗದಲ್ಲಿ ಕೇವಲ ಹತ್ತು ತಿಂಗಳಲ್ಲೇ ಕುರ್‌ಆನ್ ಕಂಠಪಾಠ ಮಾಡಿ ಹಾಫಿಝ್ ಪದವಿ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

ಪಾವೂರು ಗ್ರಾಮದ ಇನೋಳಿ ಬಿ. ಸೈಟ್ ನಿವಾಸಿ ಅಬ್ದುಲ್ ಅಝೀಝ್ ಮುಸ್ಲಿಯಾರ್ ಮತ್ತು ಝೊಹರಾ ದಂಪತಿಯ ಪುತ್ರ ಮುಹಮ್ಮದ್ ಮುಝಮ್ಮಿಲ್‌ನ ಈ ಸಾಧನೆ ಅಚ್ಚರಿ ಮೂಡಿಸಿದೆ.

ಅಬ್ದುಲ್ ಅಝೀಝ್ ಮುಸ್ಲಿಯಾರ್‌ಗೆ ನಾಲ್ಕು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು. ಆ ಪೈಕಿ ಮುಹಮ್ಮದ್, ಮುಹಮ್ಮದ್ ಮುಸ್ತಫಾ, ಮುಹಮ್ಮದ್ ಮುಝಮ್ಮಿಲ್ ಎಂಬವರು ಮರ್ಕಝ್ ತಹ್‌ಲೀಮಿಲ್ ಇಹ್ಸಾನ್‌ನಲ್ಲಿ ಕಲಿಯುತ್ತಿದ್ದಾರೆ. ಇದೀಗ ಮುಹಮ್ಮದ್ ಮುಝಮ್ಮಿಲ್ ಕೇವಲ 10 ತಿಂಗಳಲ್ಲೇ ಹಾಫಿಝ್ ಆಗಿ ತನ್ನಿಬ್ಬರು ಅಣ್ಣಂದಿರನ್ನೂ ಹಿಮ್ಮ್ಮೆಟ್ಟಿಸಿದ್ದಾರೆ.

ಬೋಳಿಯಾರ್ ಸಮೀಪದ ಕುಕ್ಕೊಟ್ಟು ಎಂಬಲ್ಲಿ ಮುಕ್ರಿಕ (ಮುಅದ್ಸಿನ್) ಆಗಿರುವ ಅಬ್ದುಲ್ ಅಝೀಝ್ ಮುಸ್ಲಿಯಾರ್ ಇನೋಳಿ ಬಿ. ಸೈಟ್‌ನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ. ಈ ಕುಟುಂಬದ ಬದುಕು ತೀರಾ ಶೋಚನೀಯವಾಗಿದೆ. ಕುಟುಂಬದ ಸದಸ್ಯರಿಗೆ ಆಧಾರ್ ಕಾರ್ಡ್ ಇದೆ. ಗಂಡ-ಹೆಂಡತಿಗೆ ಮತದಾರರ ಗುರುತಿನ ಚೀಟಿಯೂ ಇದೆ. ಆದರೆ ಈ ಕುಟುಂಬಕ್ಕೆ ರೇಶನ್ ಕಾರ್ಡ್ ಇಲ್ಲ. ಮುಸ್ಲಿಯಾರ್‌ರ ದುಡಿಮೆಯಿಂದಲೇ ಕುಟುಂಬ ಸಾಗಬೇಕು. ಅದೂ ಸಂಕಷ್ಟದ ಬದುಕು. ಆದರೆ ಅಝೀಝ್ ಮುಸ್ಲಿಯಾರ್ ತನ್ನ ಕಷ್ಟಮಯ ಬದುಕಿನ ಮಧ್ಯೆಯೂ ಮಕ್ಕಳಿಗೆ ಶಿಕ್ಷಣ ನೀಡಲು ಹಿಂಜರಿಯಲಿಲ್ಲ. ಮೂರೂ ಮಕ್ಕಳನ್ನು ತಹ್‌ಲೀಮಿಲ್ ಇಹ್ಸಾನ್‌ಗೆ ಸೇರಿಸಿದ್ದಾರೆ. ಉಳಿದ ಮೂವರು ಊರಲ್ಲೇ ಶಿಕ್ಷಣ ಪಡೆಯುತ್ತಿದ್ದಾರೆ. ಮೂಳೂರಿನ ಮರ್ಕಝ್‌ನಲ್ಲಿರುವ ಮೂವರು ಮಕ್ಕಳ ಪೈಕಿ ಮುಝಮ್ಮಿಲ್ ಹಾಫಿಝ್ ಪದವಿ ಪಡೆದುದು ಮುಸ್ಲಿಯಾರ್‌ರ ಬದುಕಿನ ಅವಿಸ್ಮರಣೀಯ ಕ್ಷಣವಾಗಿ ಮಾರ್ಪಟ್ಟಿವೆ.

‘ನನ್ನ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲ. ಆದರೆ ಮಕ್ಕಳಿಗೆ ಕಲಿಸಬೇಕು ಎಂಬ ತುಡಿತವಿತ್ತು. ಹಾಗಾಗಿ ಮೂವರನ್ನು ಮೂಳೂರಿನ ತಹ್‌ಲೀಮಿಲ್ ಇಹ್ಸಾನ್‌ಗೆ ಸೇರಿಸಿದ್ದೆ. ಆ ಪೈಕಿ ಮೂರನೆ ಪುತ್ರ ಕೇವಲ 10 ತಿಂಗಳಲ್ಲಿ ಹಾಫಿಝ್ ಆದುದು ನನಗೆ ಕುಶಿಯುಂಟು ಮಾಡಿದೆ. ಆತ ಇತರ ಮಕ್ಕಳಿಗೂ ಮಾದರಿಯಾಗಲಿ’ ಎಂದು ಅಬ್ದುಲ್ ಅಝೀಝ್ ‘ವಾರ್ತಾಭಾರತಿ’ಗೆ ಪ್ರತಿಕ್ರಿಯಿಸಿದ್ದಾರೆ.

ಮುಝಮ್ಮಿಲ್ ಶಿಸ್ತಿನ ವಿದ್ಯಾರ್ಥಿ. ಕಲಿಕೆಯಲ್ಲಿ ತುಂಬಾ ಚುರುಕು. ನಮ್ಮ ಸಂಸ್ಥೆಯಲ್ಲಿ ಒಂದು ಅಥವಾ ಒಂದುವರೆ ವರ್ಷದಲ್ಲಿ ಹಾಫಿಝ್ ಆದ ವಿದ್ಯಾರ್ಥಿಗಳು ಇದ್ದಾರೆ. ಆದರೆ, ಮುಝಮ್ಮಿಲ್ ಹಾಗಲ್ಲ, 10 ತಿಂಗಳಲ್ಲಿ ಹಾಫಿಝ್ ಆಗಿ ನಮ್ಮ ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾನೆ ಎಂದು ಉಸ್ತಾದರಾದ ಹಾಫಿಳ್ ಹಾರಿಸ್ ಸಅದಿ ತಿಳಿಸಿದ್ದಾರೆ.

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್‌ನ ಅಧ್ಯಕ್ಷ ಅಸೈಯದ್ ಕೆ.ಎಸ್.ಆಟಕೋಯ ತಂಙಳ್‌ರ ಮಾರ್ಗದರ್ಶನದಲ್ಲಿ ನಡೆಯುವ ಈ ಸಂಸ್ಥೆಯಲ್ಲಿ ಮುಝಮ್ಮಿಲ್ ಅಲ್ಪಾವಧಿಯಲ್ಲಿ ಹಾಫಿಝ್ ಆದುದು ನಮಗೆ ತುಂಬಾ ಸಂತಸವಾಗಿದೆ. ಮುಂದಿನ ದಿನಗಳಲ್ಲಿ ಆತನಿಗೆ ಉಚಿತ ಆಂಗ್ಲಮಾಧ್ಯಮ ಶಿಕ್ಷಣ ನೀಡುವ ಇರಾದೆ ಇದೆ ಎಂದು ಸಂಸ್ಥೆಯ ಮ್ಯಾನೇಜರ್ ಮುಸ್ತಫಾ ಸಅದಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News