ಮ್ಯಾನ್ಮಾರ್‌ಗೆ ಆಗಮಿಸಿದ ಪೋಪ್

Update: 2017-11-27 16:09 GMT

ಯಾಂಗನ್, ನ. 27: ನಾಲ್ಕು ದಿನಗಳ ಪ್ರವಾಸಕ್ಕಾಗಿ ಪೋಪ್ ಫ್ರಾನ್ಸಿಸ್ ಸೋಮವಾರ ಮ್ಯಾನ್ಮಾರ್‌ಗೆ ಆಗಮಿಸಿದ್ದಾರೆ. ಮ್ಯಾನ್ಮಾರ್‌ನಲ್ಲಿ ಸೇನಾ ದಮನ ಕಾರ್ಯಾಚರಣೆಗೆ ಬೆದರಿ ದೇಶದಿಂದ 6.20 ಲಕ್ಷ ಅಲ್ಪಸಂಖ್ಯಾತ ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನಗೈದಿರುವ ಹಿನ್ನೆಲೆಯಲ್ಲಿ ಪೋಪ್‌ ಭೇಟಿ ಮಹತ್ವ ಪಡೆದುಕೊಂಡಿದೆ.

80 ವರ್ಷದ ಪೋಪ್‌ರನ್ನು ವಿವಿಧ ಅಲ್ಪಸಂಖ್ಯಾತ ಗುಂಪುಗಳ ಮಕ್ಕಳು ಸ್ವಾಗತಿಸಿದರು.

ಪೋಪ್ ಈಗಾಗಲೇ ರೊಹಿಂಗ್ಯಾ ಮುಸ್ಲಿಮರನ್ನು ತನ್ನ ‘ಸಹೋದರರು ಮತ್ತು ಸಹೋದರಿಯರು’ ಎಂದು ಕರೆದು ಅವರ ಕಷ್ಟವನ್ನು ನಿವಾರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.

  ಬೌದ್ಧ ಪ್ರಾಬಲ್ಯದ ನಾಡಿನಲ್ಲಿ ಅವರ ಮಾತುಗಳನ್ನು ಎಚ್ಚರಿಕೆಯಿಂದ ಆಲಿಸಲಾಗುತ್ತಿದೆ. ಅವರು ‘ರೊಹಿಂಗ್ಯಾ’ ಪದವನ್ನು ಬಳಸುತ್ತಾರೆಯೇ ಎಂಬ ಬಗ್ಗೆ ಬೌದ್ಧ ತೀವ್ರವಾದಿಗಳು ನಿಗಾ ಇಟ್ಟಿದ್ದಾರೆ. ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮರನ್ನು ‘ರೊಹಿಂಗ್ಯಾ’ ಎಂಬುದಾಗಿ ಕರೆಯುವುದಿಲ್ಲ. ಅವರನ್ನು ‘ಬಂಗಾಳಿಗಳು’ ಎಂದು ಕರೆಯಲಾಗುತ್ತದೆ. ಬಂಗಾಳಿಗಳು ಅಂದರೆ ಬಾಂಗ್ಲಾದೇಶದಿಂದ ಬಂದಿರುವ ಅಕ್ರಮ ವಲಸಿಗರು ಎಂದರ್ಥ.

ಪೋಪ್ ಫ್ರಾನ್ಸಿಸ್ ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂ ಕಿಯನ್ನು ಭೇಟಿಯಾಗಲಿದ್ದಾರೆ. ರೊಹಿಂಗ್ಯಾ ಮುಸ್ಲಿಮ್ ವಿರುದ್ಧದ ಸೇನಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿರುವ ಸೇನಾ ಮುಖ್ಯಸ್ಥ ಮಿನ್ ಆಂಗ್ ಹಲೈಂಗ್‌ರನ್ನೂ ಅವರು ಭೇಟಿಯಾಗುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News