ಅಪಹರಣಕ್ಕೀಡಾದ ಸಫ್ವಾನ್ ಹತ್ಯೆ: ಪೊಲೀಸರಿಂದ ಅಧಿಕೃತ ಪ್ರಕಟನೆ
ಮಂಗಳೂರು, ನ. 27: ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಚೊಕ್ಕಬೆಟ್ಟು ಎಂಬಲ್ಲಿ ಅ. 5ರಂದು ಮಧ್ಯಾಹ್ನ ರೌಡಿ ತಂಡವೊಂದರಿಂದ ಅಪಹರಣಕ್ಕೊಳ ಗಾದ ಸಫ್ವಾನ್ (22) ಹತ್ಯೆಯಾಗಿರುವುದಾಗಿ ಮಂಗಳೂರು ನಗರ ಪೊಲೀಸರು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಈ ಮಧ್ಯೆ ಅಪಹರಿಸಿ ಹತೈಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂಲತ: ಕಡಂದಲೆಯ ಪ್ರಸ್ತುತ ಕಾಟಿಪಳ್ಳ-ಕೃಷ್ಣಾಪುರ ನಾಲ್ಕನೆ ಬ್ಲಾಕ್ ನಿವಾಸಿ ಮುಹಮ್ಮದ್ ಫೈಝಲ್ ಇಬ್ರಾಹೀಂ ಶೇಖ್ ಯಾನೆ ಟೊಪ್ಪಿ ಫೈಝಲ್ ಯಾನೆ ಬಾಂಬೆ ಫೈಝಲ್ (36) ಹಾಗೂ ಕೃಷ್ಣಾಪುರ 6ನೆ ಬ್ಲಾಕ್‌ನ ಸಾಹಿಲ್ ಇಸ್ಮಾಯೀಲ್ (22) ಎಂಬವರನ್ನು ಬಂಧಿಸಿದ್ದಾರೆ.
ಫೈಝಲ್, ಸಾಹಿಲ್
ಆರೋಪಿಗಳು ಮುಂಬೈಯಲ್ಲಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮುಂಬೈಯ ಬಾಂದ್ರ ವೆಸ್ಟ್‌ನ ಎಸ್‌ವಿ ರೋಡ್ ಎಂಬಲ್ಲಿಂದ ವಶಕ್ಕೆ ಪಡೆದುಕೊಂಡು ಮಂಗಳೂರಿಗೆ ಕರೆ ತಂದು ವಿಚಾರಣೆಗೊಳಪಡಿಸಿದಾಗ ಕೊಲೆ ನಡೆಸಿರುವ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಚೊಕ್ಕಬೆಟ್ಟು 8ನೆ ಬ್ಲಾಕ್ ನಿವಾಸಿ ಅಬ್ದುಲ್ ಹಮೀದ್‌ರ ಪುತ್ರ ಸಫ್ವಾನ್‌ನನ್ನು ಅ. 5ರಂದು ಹಾಡಹಗಲೇ ಚೊಕ್ಕಬೆಟ್ಟು ಬಳಿಯಿಂದ ಮಾರುತಿ ಎರ್ಟಿಕಾ ಕಾರಿನಲ್ಲಿ ಅಪಹರಿಸಿದ ತಂಡ ಕಾರ್ಕಳ ಸಮೀಪ ಕೊಲೆಗೈದು ಬಳಿಕ ಆಗುಂಬೆ ಘಾಟಿಯ ಒಂಬತ್ತನೆ ತಿರುವಿನಲ್ಲಿ ಎಸೆದು ಪರಾರಿಯಾಗಿದ್ದರು ಎನ್ನಲಾಗಿದೆ.
ಅಬ್ದುಲ್ ಹಮೀದ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಆದರೆ, ತನಿಖೆ ವಿಳಂಬಗತಿಯಲ್ಲಿ ಸಾಗುತ್ತಿದ್ದಂತೆಯೇ ಡಿವೈಎಫ್‌ಐ ಸಂಘಟನೆ ಇದರ ವಿರುದ್ಧ ತೀವ್ರ ಹೋರಾಟ ನಡೆಸಿತ್ತು. ಇದೀಗ ಇಬ್ಬರನ್ನು ಬಂಧಿಸಿದ ಪೊಲೀಸರು ಕೃತ್ಯದಲ್ಲಿ ಪಾಲ್ಗೊಂಡ ರೌಡಿ ಸಫ್ವಾನ್ ಮತ್ತಾತನ ಸಹಚರರಾದ ಸಂಶುದ್ದೀನ್ ಯಾನೆ ಸಂಶು ಹಾಗೂ ಸಹಕರಿಸಿದವರ ಸೆರೆಗೆ ಬಲೆ ಬೀಸಿದ್ದಾರೆ. ಅಲ್ಲದೆ ಕೃತ್ಯಕ್ಕೆ ಬಳಸಿದ ಕಾರಿನ ಶೋಧ ಕಾರ್ಯ ನಡೆಸುತ್ತಿದ್ದಾರೆ.
ನಾಲ್ಕು ತಂಡಗಳ ರಚನೆ
ಪ್ರಕರಣವನ್ನು ಭೇದಿಸಲು ಪೊಲೀಸ್ ಆಯುಕ್ತರು ನಾಲ್ಕು ಪೊಲೀಸ್ ತಂಡವನ್ನು ರಚಿಸಿದ್ದರು. ಆ ಪೈಕಿ ಒಂದು ತಂಡವು ಬಾಂಬೆ ಫೈಝಲ್‌ನ ಹಿಂದೆ ಬಿದ್ದಿತ್ತು. ಈತನಿಗೆ ಮೂರು ಮದುವೆಯಾಗಿದ್ದು, ಆ ಪೈಕಿ ಒಬ್ಬಾಕೆ ಮುಂಬೈಯವಳು. ಹಾಗಾಗಿ ಆರೋಪಿ ಕೃತ್ಯ ನಡೆಸಿದ ಬಳಿಕ ಮುಂಬೈಗೆ ಪರಾರಿ ಯಾಗಿರಬಹುದು ಎಂದು ಶಂಕಿಸಿದ ಪೊಲೀಶರು ಮುಂಬೈಯತ್ತ ಚಿತ್ತ ಬೆಳೆಸಿದ್ದರು. ಅದಂತೆ ಆತ ಮುಂಬೈಯಲ್ಲಿರುವ ಪತ್ನಿಯ ಸಂಪರ್ಕದಲ್ಲಿರುವುದನ್ನು ಅರಿತು ದಾಳಿ ಮಾಡಿದರಲ್ಲದೆ, ಆತನೊಂದಿಗಿದ್ದ ಸಾಹಿಲ್ ಇಸ್ಮಾಯೀಲ್‌ನನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಫ್ವಾನ್‌ನ ಮೃತದೇಹದ ಕಳೇಬರ ಮತ್ತು ಅಪಹರಣಕಾರರು ಬಳಸಿದ ಕಾರಿನ ಬಗ್ಗೆ ಹಾಗೂ ತಲೆಮರೆಸಿಕೊಂಡಿರುವ ಆರೋಪಿಗಳ ಹಾಗೂ ಆರೋಪಿಗಳಿಗೆ ಸಹಕರಿಸಿದ ಮತ್ತು ಆಶ್ರಯ ನೀಡಿದವರ ಶೋಧ ಕಾರ್ಯ ನಡೆತ್ತಿವೆ. ಪೊಲೀಸ್ ತಂಡವು ತಜ್ಞರ ಸಹಾಯ ಪಡೆದು ಘಟನಾ ಸ್ಥಳಕ್ಕೆ ತೆರಳಿ ತನಿಖೆ ನಡೆಸಲಿದೆ ಎಂದು ತಿಳಿದು ಬಂದಿದೆ.
ಸುರತ್ಕಲ್, ಕೃಷ್ಣಾಪುರ, ಕಾಟಿಪಳ್ಳ ಪರಿಸರ ವ್ಯಾಪ್ತಿಯಲ್ಲಿ ಇತ್ತೀಚೆಗೆ ಹೊರಗಿನಿಂದ ಬಂದ ದುಷ್ಕರ್ಮಿಗಳು ಸ್ವಂತ ಮತ್ತು ಬಾಡಿಗೆಗೆ ಮನೆ ಪಡೆದು ದುಷ್ಕೃತ್ಯ ನಡೆಸುತ್ತಿದ್ದಾರೆ. ಇದರಿಂದ ಪರಿಸರದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗಿದೆ. ಅಲ್ಲದೆ ಈ ಪರಿಸರಕ್ಕೂ ಕೆಟ್ಟ ಹೆಸರು ಬರುತ್ತಿವೆ. ಹಾಗಾಗಿ ಮನೆ ಮಾಲಕರು ದುಷ್ಕರ್ಮಿಗಳಿಗೆ ಮನೆ ನೀಡಬಾರದು ಎಂಬ ಮಾತು ಸ್ಥಳೀಯವಾಗಿ ಕೇಳಿ ಬರುತ್ತಿವೆ. ಅಲ್ಲದೆ, ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲು ಸ್ಥಳೀಯ ಸಾರ್ವಜನಿಕರು ಮುಂದಾಗಿದ್ದಾರೆ.