ತಾಂಝಾನಿಯದಲ್ಲಿ ಪ್ರಪ್ರಥಮ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ: ಭಾರತೀಯ ವೈದ್ಯರ ಸಾಧನೆ

Update: 2017-11-27 16:29 GMT

 ಹೊಸದಿಲ್ಲಿ, ನ.27: ತಾಂಝಾನಿಯದ ರಾಜಧಾನಿ ದಾರುಸ್ಸಲಾಂನ ಆಸ್ಪತ್ರೆಯ ಸಹಯೋಗದಲ್ಲಿ ಭಾರತದ ವೈದ್ಯರ ತಂಡವೊಂದು ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ನಡೆಸಿದ್ದು ಆ ದೇಶದಲ್ಲಿ ನಡೆಸಲಾದ ಪ್ರಪ್ರಥಮ ಕಿಡ್ನಿ ಕಸಿ ಇದಾಗಿದೆ.

 ತೀವ್ರ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ತಾಂಝಾನಿಯದ 30ರ ಹರೆಯದ ಮಹಿಳೆಗೆ ಆ ದೇಶದ ‘ಮುಹಿಂಬಿಲಿ ನ್ಯಾಷನಲ್ ಹಾಸ್ಪಿಟಲ್’ನಲ್ಲಿ ದಿಲ್ಲಿ ಮೂಲದ ಬಿಎಲ್‌ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ. ಮಹಿಳೆಗೆ ಆಕೆಯ ಸೋದರ ತನ್ನ ಒಂದು ಕಿಡ್ನಿಯನ್ನು ದಾನ ಮಾಡಿದ್ದಾನೆ. ತಾಂಝಾನಿಯ ದೇಶದಲ್ಲಿ ಪ್ರಪ್ರಥಮವಾಗಿ ನಡೆಸಿದ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯನ್ನು ಭಾರತೀಯ ವೈದ್ಯರು ನಡೆಸಿರುವುದು ಬಹುದೊಡ್ಡ ಗೌರವದ ವಿಷಯವಾಗಿದೆ ಎಂದು ಬಿಎಲ್‌ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ನರೇಶ್ ಕಪೂರ್ ಹೇಳಿದ್ದಾರೆ.

ಕಿಡ್ನಿ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ ಹಾಗೂ ಕಿಡ್ನಿ ದಾನ ನೀಡಿದ ಆಕೆಯ ಸೋದರ ಇಬ್ಬರೂ ತ್ವರಿತವಾಗಿ ಚೇತರಿಸಿಕೊಳ್ಳುತ್ತಿದ್ದು ಶೀಘ್ರವೇ ದೈನಂದಿನ ಚಟುವಟಿಕೆ ನಡೆಸಲು ಸಮರ್ಥರಾಗಲಿದ್ದಾರೆ ಎಂದು ಬಿಎಲ್‌ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ‘ಯುರೋಲಜಿ ಮತ್ತು ಕಿಡ್ನಿ ಕಸಿ ವಿಭಾಗದ’ ಮಖ್ಯಸ್ಥ ಡಾಎಚ್.ಎಸ್.ಭಟ್ಯಾಲ್ ತಿಳಿಸಿದ್ದಾರೆ.

ತಾಂಝಾನಿಯದ ಆರೋಗ್ಯ ಸಚಿವ ಉಮ್ಮಿ ಮ್ವಲಿಮು ಅವರು ಈ ಚಾರಿತ್ರಿಕ ವೈದ್ಯಕೀಯ ಸಾಧನೆಗೆ ಭಾರತದ ವೈದ್ಯರನ್ನು ಅಭಿನಂದಿಸಿದ್ದಾರೆ. ಈ ಯಶಸ್ವಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯು ಆಫ್ರಿಕಾದ ರಾಷ್ಟ್ರಗಳಲ್ಲಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗಾಗಿ ಕಾಯುತ್ತಿರುವ ಹಲವಾರು ಜನರಲ್ಲಿ ಆಶಾಭಾವನೆ ಮೂಡಿಸಿದೆ ಎಂದವರು ಅಭಿನಂದನಾ ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News