ಬಾಲಿ ಜ್ವಾಲಾಮುಖಿ: 2ನೆ ದಿನವೂ ವಿಮಾನ ನಿಲ್ದಾಣ ಬಂದ್

Update: 2017-11-28 14:02 GMT

ಜಕಾರ್ತ (ಇಂಡೋನೇಶ್ಯ), ನ. 28: ಇಂಡೋನೇಶ್ಯದ ಬಾಲಿ ದ್ವೀಪದಲ್ಲಿರುವ ಮೌಂಟ್ ಅಗಂಗ್ ಜ್ವಾಲಾಮುಖಿ ಬೂದಿಯುಗುಳುವುದನ್ನು ಮುಂದುವರಿಸಿದ್ದು, ಅಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಎರಡನೆ ದಿನವಾದ ಮಂಗಳವಾರವೂ ಮುಚ್ಚಿದೆ. ಇದರಿಂದಾಗಿ ಸಾವಿರಾರು ಪ್ರಯಾಣಿಕರು ದ್ವೀಪದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

ಅದೇ ವೇಳೆ, ತಮ್ಮ ಮನೆಗಳಿಂದ ಸ್ಥಳಾಂತರಗೊಳ್ಳಬೇಕೆಂದು ಸ್ಥಳೀಯರಿಗೆ ನೀಡಿರುವ ಎಚ್ಚರಿಕೆಯನ್ನು ಅಧಿಕಾರಿಗಳು ಪುನರುಚ್ಚರಿಸಿದ್ದಾರೆ.

ಮೌಂಟ್ ಅಗಂಗ್ ಬಿಳಿ ಮತ್ತು ಕಡು ಬೂದು ಬಣ್ಣದ ಬೂದಿಯ ಮೋಡಗಳನ್ನು ಸುಮಾರು 4 ಕಿಲೋಮೀಟರ್ ಎತ್ತರಕ್ಕೆ ಚಿಮ್ಮಿಸುತ್ತಿದೆ ಹಾಗೂ ಕ್ರೇಟರ್‌ನಲ್ಲಿ ಲಾವಾ ರಸವು ಮೇಲಕ್ಕೆ ಬರುತ್ತಿದೆ.

ಸುರಕ್ಷತೆಯ ಕಾರಣಗಳಿಗಾಗಿ ವಿಮಾನ ನಿಲ್ದಾಣವು ಇನ್ನೂ 24 ಗಂಟೆಗಳ ಕಾಲ ಮುಚ್ಚಿರುವುದು ಅಗತ್ಯವಾಗಿದೆ ಎಂದು ಸ್ಥಳೀಯ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

ಲಾವಾ ಬೂದಿಯು ವಿಮಾನಗಳಿಗೆ ಅತ್ಯಂತ ಅಪಾಯಕಾರಿಯಾಗಿದೆ. ಜ್ವಾಲಾಮುಖಿಯ ಬೂದಿಯು ವಿಮಾನ ನಿಲ್ದಾಣದತ್ತ ಚಲಿಸುತ್ತಿದೆ. ಬೂದಿಯು ಈಗಾಗಲೇ ಆಕಾಶದಲ್ಲಿ 9 ಕಿ.ಮೀ. ಎತ್ತರವನ್ನು ತಲುಪಿದೆ ಹಾಗೂ ಇಡೀ ದ್ವೀಪವನ್ನು ಆವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News