×
Ad

ಅಂಬೇಡ್ಕರ್ ಕುರಿತ ಪೇಜಾವರ ಶ್ರೀ ಹೇಳಿಕೆ ಸರಿಯಲ್ಲ : ಮರಿಸ್ವಾಮಿ

Update: 2017-11-29 19:04 IST

ಭಟ್ಕಳ,ನ.29: ಉಡುಪಿಯ ಪೇಜಾವರ ಸ್ವಾಮಿಜಿಯವರು ಡಾ. ಬಿ.ಆರ್. ಅಂಬೇಡ್ಕರ್‍ರವರು ಒಬ್ಬರೇ  ಸಂವಿಧಾನವನ್ನು ರಚಿಸಿಲ್ಲ ಎಂಬ ಹೇಳಿಕೆ ಬಾಲಿಶತನದಿಂದ ಕೂಡಿದ್ದು ಸಂವಿಧಾನ ರಚನೆಯ ಇತಿಹಾಸ ಕೂಲಂಕುಷವಾಗಿ ಅಧ್ಯಯನ ಮಾಡುವ ಅವಶ್ಯಕತೆಯಿದೆ ಎಂದು ಸಮುದಾಯ ಅಭಿವೃದ್ಧಿ ಯೋಜನೆ ಆರ್.ಎನ್.ಎಸ್ ಪಾಲಿಟೆಕ್ನಿಕ್ ಮುರ್ಡೆಶ್ವರದ ಸಂಯೋಜನಧಿಕಾರಿ ಕೆ. ಮರಿಸ್ವಾಮಿ  ಹೇಳಿದರು.

ಅವರು ಇಲ್ಲಿನ ಬಂದರ್ ನಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.ಭಾರತೀಯ ಎಲ್ಲಾ  ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು, ವಿಚಾರ, ಅಭಿವ್ಯಕ್ತಿ, ನಂಬಿಕೆ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು, ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನು ವ್ಯಕ್ತಿ ಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಭ್ರಾತೃತ್ವ  ಭಾವನೆಯನ್ನು ಮೂಡಿಸುವುದು ಸಂವಿಧಾನದ ಉದ್ದೇಶವಾಗಿದ್ದು ಸಂವಿಧಾನ ಆಶಯವನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು.

ಡಾ.ಅಂಬೇಡ್ಕರರು ಒಂಟಿಯಾಗಿಯೇ ಸಂವಿಧಾನ ರಚಿಸಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಸಂವಿಧಾನ ರಚನಾ ಕರಡು ಸಮಿತಿಯಲ್ಲಿದ್ದ 7ಸದಸ್ಯರಲ್ಲಿ ವಿವಿಧ ಕಾರಣಕ್ಕಾಗಿ ರಾಜಿನಾಮೆ ನೀಡಿದ್ದರು. ಕೊನೆಗೆ ಒಂಟಿಯಾಗಿಯೆ ಈ ಮಹಾತ್ಕಾರ್ಯವನ್ನು ಬಾಬಾ ಸಾಹೇಬರು ಮಾಡಿದರು. 1952ರಲ್ಲಿ ಅಮೇರಿಕಾದ  ಕೊಲಂಬಿಯಾ ವಿಶ್ವವಿದ್ಯಾಲಯವು  ಡಾ. ಬಿ.ಆರ್. ಅಂಬೇಡ್ಕರ್ ರವರ ಬಾರತ ಸಂವಿಧಾನ ಸಾದನೆ ಗುರುತಿಸಿ ಎಲ್.ಎಲ್.ಡಿ. ಡಿಗ್ರೀ ನೀಡಿ ಗೌರವಿಸಲಾಯಿತು.  ಉಡುಪಿಯ ಪೇಜಾವರ ಸ್ವಾಮಿಜಿಯವರು ಡಾ. ಬಿ.ಆರ್. ಅಂಬೇಡ್ಕರ್‍ರವರು ಒಬ್ಬರೇ  ಸಂವಿಧಾನವನ್ನು ರಚಿಸಿಲ್ಲ ಎಂದು ಇತ್ತೀಚಿಗೆ   ಹೇಳಿಕೆ ನೀಡುತ್ತಾರೆ,  ಈ  ಮೇಲಿನ ಅಂಶವನ್ನು ಗಮನಿಸಿದಾಗ, ಕುಲಂಕುಶವಾಗಿ ಅಧ್ಯಯನ ಮಾಡಿದಾಗ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚಿಸಲು ಎಷ್ಟೆಲ್ಲಾ ಶ್ರಮಿಸಿದ್ದಾರೆ ಎಂಬುದು ಗಮನಕ್ಕೆ ಬರುತ್ತದೆ. ಸಂವಿಧಾನದ ಹೃದಯ ಭಾಗವೆಂದೆ ಕರೆಯಲ್ಪಡುವ  ಮೂಲಭೂತ ಹಕ್ಕು ಹಾಗೂ ಕರ್ತವ್ಯದ ಬಗ್ಗೆ ತಿಳಿದುಕೊಂಡು ಸಂವಿಧಾನದ ಆಶಯದಂತೆ ನಾವೆಲ್ಲರೂ  ನಡೆಯೋಣ  ಭಾರತದ ಶ್ರೇಯೋಭಿವೃಧ್ಧಿಗೆ ಶ್ರಮಿಸೋಣ ಎಂದು ಅವರು ಕರೆ ನೀಡಿದರು. 

ಈ ಸಂದರ್ಭದಲ್ಲಿ ಸಿ.ಡಿ.ಟಿ.ಪಿ ಯೋಜನೆಯ ಪ್ರಕಾಶ ಜೆ.ಸಿ,  ಹೊಲಿಗೆ ತರಬೇತಿ ಶಿಕ್ಷಕಿ ಯಮುನಾ ನಾಯ್ಕ,  ಗಂಗಾ ಜಲ ಮಹಿಳಾ ಮಂಡಲದ ಪ್ರಮುಖರು ಹಾಗೂ ಇತರ ಮಹಿಳೆಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News